ಚೆನ್ನೈ : ತಮಿಳುನಾಡಿನ ಕುಡ್ಡಲೂರು ಜಿಲ್ಲೆಯಲ್ಲಿ ಪಟಾಕಿ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಕತ್ತುಮನ್ನಾರ್ ಕೋಯಿಲ್ ಪ್ರದೇಶದ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಮೃತರ ಸಂಖ್ಯೆ ಆರಂಭದಲ್ಲಿ ಐದು ಎಂದು ತಿಳಿಸಲಾಗಿತ್ತು. ಇದೀಗ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರ್ಖಾನೆಯ ಮಾಲಕಿಯೂ ಈ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಬಹುತೇಕರು ಮಹಿಳೆಯರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರು ಧಾವಿಸಿದ್ದು, ರೋಧಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಫೋಟಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಮೃತಪಟ್ಟವರೆಲ್ಲರೂ ಮಹಿಳೆಯರೇ ಎಂದು ತಿಳಿದು ಬಂದಿದೆ. ಫ್ಯಾಕ್ಟರಿ ಮಾಲಕಿ ಗಂಧಿಮತಿ ಮತ್ತು ಇತರ ಎಂಟು ಮಂದಿ ಮಹಿಳೆಯರು ಪಟಾಕಿ ತಯಾರಿಕೆಯಲ್ಲಿ ನಿರತರಾಗಿದ್ದರು. ಈ ವೇಳೆ ಪಟಾಕಿ ಸಿಡಿದಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಫೋಟೊ ಸಾಂಕೇತಿಕ
ಫೊಟೊ ಕೃಪೆ : ಇಂಡಸ್ಟ್ರಿಯಲ್ ಫೈಯರ್ ವರ್ಡ್ ಡಾಟ್ ಕಾಂ