ಬೆಂಗಳೂರು: ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆಯ ಬಳಿಕ ಸಂತ್ರಸ್ತೆಯನ್ನು ಭೇಟಿ ಮಾಡುವುದಕ್ಕೆ ಕರ್ನಾಟಕ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಆದರೂ, ಬಿಜೆಪಿಯ ಸತ್ಯಶೋಧನಾ ನಿಯೋಗವು ಸಂತ್ರಸ್ತೆಯನ್ನು ಭೇಟಿ ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹೈಕೋರ್ಟ್ ನ ನಿರ್ಬಂಧದ ಹೊರತಾಗಿಯೂ ದೌರ್ಜನ್ಯಕ್ಕೆ ಒಳಗಾಗಿರುವ ಬೆಳಗಾವಿಯ ಸಂತ್ರಸ್ತ ಮಹಿಳೆಯನ್ನು ಭೇಟಿಮಾಡುವ ಮೂಲಕ ಬಿಜೆಪಿ ನಾಯಕರು ನ್ಯಾಯಾಲಯದ ಸೂಚನೆಯನ್ನು ಉಲ್ಲಂಘಿಸಿ ಅಗೌರವಿಸಿರುವುದು ಮಾತ್ರ ಅಲ್ಲ, ತಮ್ಮ ಅಸೂಕ್ಷ್ಮತೆಯನ್ನು ಮೆರೆದಿದ್ದಾರೆ. ಸಂತ್ರಸ್ತ ಮಹಿಳೆ ಮಾನಸಿಕ ಆಘಾತದಲ್ಲಿರುವ ಈ ಸಂದರ್ಭದಲ್ಲಿ ಆಕೆಯ ಭೇಟಿಗೆ ಅಗಮಿಸುವವರನ್ನು ನಿರ್ಬಂಧಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ ಎಂದು ಸಿಎಂ ಹೇಳಿದ್ದಾರೆ.
ಮಹಿಳೆಯು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಂದರ್ಶಕರ ಭೇಟಿಯು ಆಕೆಯ ಆರೋಗ್ಯ ಹಾಗೂ ಚಿಕಿತ್ಸೆಯ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಮಹಿಳೆಯ ಹಿತದೃಷ್ಟಿಯಿಂದ ಸಂದರ್ಶಕರ ಭೇಟಿಯನ್ನು ನಿರ್ಬಂಧಿಸುವುದು ಅಗತ್ಯ ಎಂದು ತಾನು ಭಾವಿಸುವುದಾಗಿ ಹೈಕೋರ್ಟ್ ಹೇಳಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಯಾವುದೇ ವ್ಯಕ್ತಿ, ಸಮೂಹ, ಗುಂಪು, ಸಂಘಟನೆ, ರಾಜಕೀಯ ಪಕ್ಷಗಳು ಹಾಗೂ ಇನ್ನಿತರರು ಮಹಿಳೆಯ ಚಿಕಿತ್ಸೆಯ ಹೊಣೆ ಹೊತ್ತಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರ ಪೂರ್ವ ಲಿಖಿತ ಅನುಮತಿ ಇಲ್ಲದೇ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು. ಗಿದ್ದರೂ ಒಂದು ಅಮಾನುಷ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸುವ ದುರ್ಬುದ್ಧಿ ತೋರಿರುವ ಬಿಜೆಪಿ ನಾಯಕರು ಸತ್ಯಶೋಧನೆಯ ಹೆಸರಿನಲ್ಲಿ ನ್ಯಾಯಾಲಯದ ಆದೇಶ, ನಿರ್ದೇಶನಗಳನ್ನು ಗಾಳಿಗೆ ತೂರಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಂತ್ರಸ್ತೆಯ ಸೂಕ್ಷ್ಮ ಮಾನಸಿಕ ಸ್ಥಿತಿಯ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ಸಂವೇದನಾಶೂನ್ಯ ಬಿಜೆಪಿ ನಾಯಕರು ಹಾಗೂ ಅವರ ಬೆನ್ನಿಗೆ ನಿಂತು ಚಿತಾವಣೆ ನಡೆಸುತ್ತಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ನಡೆ-ನುಡಿಯನ್ನು ನಾಗರಿಕ ಸಮಾಜ ಖಂಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮದಲಿ ಪೋಸ್ಟ್ ಮಾಡಿಕೊಂಡಿದ್ದಾರೆ.