ಉಡುಪಿ: ನೇಜಾರುವಿನ ತೃಪ್ತಿ ಲೇಔಟ್ ನಲ್ಲಿ ಬೆಳಗ್ಗೆ ಮಹಿಳೆ ಮತ್ತು ಮಕ್ಕಳನ್ನು ಬರ್ಬರವಾಗಿ ಕೊಂದ ಕೊಲೆಗಾರ ಸಂತೆಕಟ್ಟೆಯಿಂದ ತೃಪ್ತಿ ಲೇಔಟ್ ಗೆ ಆಟೋ ರಿಕ್ಷಾದಲ್ಲಿ ಆಗಮಿಸಿದ್ದ ಮತ್ತು ಆತ ಕನ್ನಡ ಮಾತಾಡಿದ್ದಾನೆ ಎಂದು ರಿಕ್ಷಾಚಾಲಕ ಶ್ಯಾಮ್ ಎಂಬವರು ಮಾಹಿತಿ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ರಿಕ್ಷಾ ಚಾಲಕ ಶ್ಯಾಮ್, ಇಂದು ಬೆಳಗ್ಗೆ 8:30ರಿಂದ 9 ಗಂಟೆಯ ಮಧ್ಯದ ಸಮಯಯದಲ್ಕಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಕ್ವಿನ್ಸ್ ರಸ್ತೆಯಲ್ಲಿ ನನ್ನ ರಿಕ್ಷಾ ಹತ್ತಿದ್ದಾನೆ. ನೇಜಾರುವಿನ ತೃಪ್ತಿ ಲೇಔಟ್ ಗೆ ಕರೆದೊಯ್ಯುವಂತೆ ಹೇಳಿದ್ದಾನೆ. ಅದರಂತೆ ಆತನನ್ನು ತೃಪ್ತಿ ಲೇಔಟ್ ನಲ್ಲಿ ಮನೆಯೊಂದರ ಗೇಟ್ ಹತ್ತಿರ ಬಿಟ್ಟಿದ್ದೇನೆ. ಅದು ಇದೀಗ ಕೊಲೆ ನಡೆದಿರುವ ಮನೆ ಅದೇ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿ ನೀಡಿದ ರಿಕ್ಷಾ ಚಾಲಕ, ಬಳಿಕ ಅಂದಾಜು 15 ನಿಮಿಷಗಳ ಅಂತರದಲ್ಲಿ ಆತ ಮತ್ತೆ ಸಂತೆಕಟ್ಟೆ ಆಟೋ ನಿಲ್ದಾಣಕ್ಕೆ ಬಂದು ಕ್ಯೂನಲ್ಲಿದ್ದ ಬೇರೊಂದು ರಿಕ್ಷಾ ಏರಿದ್ದನ್ನು ನೋಡಿದ್ದೇನೆ. ಆತನನ್ನು ಗುರುತಿಸಿದ ನಾನು ಇಷ್ಟು ಬೇಗ ಬರಲಿಕ್ಕಿದ್ದರೆ ನಾನು ಕಾಯುತ್ತಿದ್ದೆ ಎಂದು ಹೇಳಿದ್ದೇನೆ. ಆತ ಪರವಾಗಿಲ್ಲ ಎಂದು ಹೇಳಿ ವೇಗವಾಗಿ ತಾನು ಕುಳಿತ ರಿಕ್ಷಾ ಚಾಲಕನಿಗೆ ಬೇಗ ಹೋಗುವಂತೆ ಸೂಚಿಸಿದ್ದಾನೆ. ಎಂದು ಹೇಳಿದ್ದಾರೆ.
ಆತ ಕನ್ನಡ ಮಾತನಾಡುತ್ತಿದ್ದ, ಆತನ ವಯಸ್ಸು ಸಮಾರಯ 45 ವರ್ಷ. ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಆತನ ಕಣ್ಣಿನ ಭಾಗ ಮಾತ್ರ ಕಾಣಿಸುತ್ತಿತ್ತು. ಬೋಳು ತಲೆಯ ಆ ವ್ಯಕ್ತಿ ಬಿಳಿ ಮೈಬಣ್ಣ ಹೊಂದಿದ್ದ ಎಂದೂ ಶ್ಯಾಮ್ ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ನೇಜಾರುವಿನ ತೃಪ್ತಿ ಲೇಔಟ್ ಬಳಿ ಹಸೀನಾ(42), ಅವರ ಮಕ್ಕಳಾದ ಅಫ್ರಾನ್(22) ಮತ್ತು ಅಯ್ತಾಝ್(20) ಮತ್ತು ಪುತ್ರ ಅಸೀಮ್(12)ನನ್ನು ಬರ್ಬರವಾಗಿ ಆಯುಧದಿಂದ ಇರಿದು ಕೊಲೆಗೈಯಲಾಗಿತ್ತು. ಹಸೀನಾರ ಅತ್ತೆ ಹಾಜಿರಾ(70) ಕೂಡ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ.