ತಿರುವನಂತಪುರಂ: ಪತ್ರಕರ್ತೆಯ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಗೋಪಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. ಪತ್ರಕರ್ತೆ ನೀಡಿದ ದೂರಿನ ಮೇರೆಗೆ ಈ ಸಮನ್ಸ್ ನೀಡಲಾಗಿದೆ. ನವೆಂಬರ್ 18 ರೊಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಲು ಸುರೇಶ್ ಗೋಪಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಸುರೇಶ್ ಗೋಪಿ ಕೇರಳದ ಕೋಝಿಕ್ಕೋಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತಿನಲ್ಲಿ ತೊಡಗಿದ್ದಾಗ, ಮಾಧ್ಯಮದ ಮಹಿಳೆಯ ಭುಜದ ಮೇಲೆ ಎರಡು ಬಾರಿ ಕೈಯಿಟ್ಟಿದ್ದಾರೆ. ಮೊದಲನೇ ಸಲ ಕೈ ಹಾಕಿದಾಗ ಪತ್ರಕರ್ತೆ ಕೈಯನ್ನು ತೆಗೆದರೂ ಮತ್ತೆ ಸುರೇಶ್ ಗೋಪಿ ಆಕೆಯ ಭುಜದ ಮೇಲೆ ಕೈ ಹಾಕಿದ್ದರು.
ಘಟನೆ ವಿವಾದಕ್ಕೆ ಕಾರಣವಾದ ನಂತರ ಅವರು ಪತ್ರಕರ್ತರಲ್ಲಿ ಕ್ಷಮೆಯಾಚಿಸಿದ್ದರು. “ನನ್ನ ವರ್ತನೆ ಬಗ್ಗೆಅವಳು ಕೆಟ್ಟದಾಗಿ ಭಾವಿಸಿದ್ದರೆ ಅವಳ ಭಾವನೆ ಗೌರವಿಸಿ ನಾನು ಅವಳಿಗೆ ಕ್ಷಮೆಯಾಚಿಸುತ್ತೇನೆ. ಕ್ಷಮಿಸಿ …” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು.
ಆದರೆ, ರಾಜಕಾರಣಿಯ ಕ್ಷಮೆಯಾಚನೆಯು ವಿವರಣೆಯಂತೆ ತೋರುತ್ತಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಚಿಸುತ್ತಿದ್ದೇನೆ ಎಂದು ಪತ್ರಕರ್ತೆ ಹೇಳಿದ್ದರು. ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ಗೋಪಿ ವಿರುದ್ಧ ಮಹಿಳಾ ಆಯೋಗಕ್ಕೆ “ದುರ್ವರ್ತನೆ”ಗಾಗಿ ದೂರು ನೀಡುವುದಾಗಿಯೂ ಹೇಳಿತ್ತು.