ಹಾವೇರಿ: ಟೊಮೆಟೊ ದರ ನೂರರ ಗಡಿ ದಾಟಿರುವ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಕಳ್ಳತನದ ಭೀತಿ ಎದುರಾಗಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಸಿಸಿಟಿವಿ ಅಳವಡಿಸಿ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದ ಮಾರುಕಟ್ಟೆಯಲ್ಲಿ ಕೃಷ್ಣಪ್ಪ ಎಂಬ ವ್ಯಾಪಾರಿಯೊಬ್ಬರು ಸಿಸಿಟಿವಿ ಅಳವಡಿಸಿ ಟೊಮೆಟೊ ಮಾರಾಟ ಮಾಡುತ್ತಿದ್ದಾರೆ.
ಸದ್ಯ ಹಾವೇರಿ ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆಜಿಗೆ 120 ರೂ. ಇದೆ. ಹಾಗಾಗಿ ಬಹಳಷ್ಟು ಕಳ್ಳತನ ಆಗುತ್ತಿದೆ. ಹತ್ತಾರು ಜನ ಒಮ್ಮೆಲೇ ಮಾರುಕಟ್ಟೆಗೆ ಬರುತ್ತಾರೆ. ಗೊತ್ತಾಗದಂತೆ ನಾಲ್ಕೈದು ಟೊಮೆಟೊ ತೆಗೆದುಕೊಂಡು ಹೋದರೂ ಮೂವತ್ತರಿಂದ ನಲವತ್ತು ರೂಪಾಯಿ ನಮಗೆ ನಷ್ಟ ಆಗುತ್ತದೆ ಎಂದಿದ್ದಾರೆ ಕೃಷ್ಣಪ್ಪ.
ಜನರ ಜೊತೆ ಜಗಳ ಮಾಡುತ್ತಾ ಕುಳಿತುಕೊಳ್ಳಲು ಆಗುವುದಿಲ್ಲ. ಅದಕ್ಕಿಂತ ಸಿಸಿ ಕ್ಯಾಮರಾ ಅಳವಡಿಸಿದ್ರೆ ಸಮಸ್ಯೆ ಇರಲ್ಲ. ಹೀಗಾಗಿ ಸಿಸಿ ಕ್ಯಾಮರಾ ಅಳವಡಿಸಿ ಟೊಮೆಟೊ ಮಾರಾಟ ಮಾಡುತ್ತಿದ್ದೇನೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.
ದೇಶದ ಪ್ರಮುಖ ನಗರಗಳಲ್ಲಿ ಟೊಮೆಟೊ ದರ ಕೆಜಿಗೆ 125-158 ರೂ.ಗಳ ನಡುವೆ ಇದೆ. ಕಳೆದ ವಾರ, ಸ್ಥಳೀಯ ಅಂಗಡಿಗಳಲ್ಲಿ ಟೊಮೆಟೊ ಬೆಲೆ ಮೊದಲು ಕೆಜಿಗೆ 100 ರೂಪಾಯಿ ಗಡಿ ದಾಟಿತ್ತು.
ಏಪ್ರಿಲ್ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಉತ್ತರ ಭಾರತದಲ್ಲಿ ಬೆಳೆದು ನಿಂತ ಬೆಳೆಗಳು ನಾಶವಾಗಿದ್ದವು. ಇದು ಕೂಡ ಟೊಮೆಟೊ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಪರಿಣಾಮವಾಗಿ ಉತ್ತರದ ರಾಜ್ಯಗಳು ಕರ್ನಾಟಕದಂತಹ ದಕ್ಷಿಣದ ರಾಜ್ಯಗಳಿಂದ ಟೊಮೆಟೊವನ್ನು ಖರೀದಿಸಲು ಆರಂಭಿಸಿದವು. ಇದರಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿಯೂ ಟೊಮೆಟೊ ಬೆಲೆ ಏರಿಕೆಯಾಗಿದೆ.