ರಾಮ ಮಂದಿರ ನಿರ್ಮಾಣಕ್ಕೆ ಉತ್ತರಪ್ರದೇಶ ಅಧಿಕಾರಿಗಳ ಒಂದು ದಿನದ ವೇತನ ಸಂಗ್ರಹ

Prasthutha|

- Advertisement -

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಉತ್ತರಪ್ರದೇಶದಲ್ಲಿ ಪಿಡಬ್ಲ್ಯುಡಿ ಅಧಿಕಾರಿಗಳ ಒಂದು ದಿನದ ವೇತನವನ್ನು ಮೇಲಾಧಿಕಾರಿಗಳು ಬಲವಂತವಾಗಿ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪಿಡಬ್ಲ್ಯುಡಿ ಅಭಿವೃದ್ಧಿ ಇಲಾಖೆಯ ಹಿರಿಯ ಎಂಜಿನಿಯರ್ ರಾಜ್‌ಪಾಲ್ ಸಿಂಗ್ ಅವರು ಮಂದಿರ ನಿರ್ಮಾಣಕ್ಕಾಗಿ ಎಲ್ಲಾ ಅಧಿಕಾರಿಗಳಿಂದ ಒಂದು ದಿನದ ವೇತನವನ್ನು ಸಂಗ್ರಹಿಸುವ ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ರಾಜ್‌ಪಾಲ್ ಸಿಂಗ್ ಅವರು ‘ಪಿಡಬ್ಲ್ಯುಡಿ ರಾಮ್ ಮಂದಿರ್ ವೆಲ್ಫೇರ್’ ಎಂಬ ಹೆಸರಿನಲ್ಲಿ ಖಾತೆ ತೆರೆಯುವಂತೆ ಲಕ್ನೋದ ಹಝ್ರತ್ ಗಂಜ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಪಿಡಬ್ಲ್ಯುಡಿ ಅಧಿಕಾರಿಗಳ ಒಂದು ದಿನದ ವೇತನವನ್ನು ಈ ಖಾತೆಯಲ್ಲಿ ಸಂಗ್ರಹಿಸಲಾಗುವುದು. ಕಚೇರಿ ಅಧೀಕ್ಷಕ ಮುನೀಶ್ ಕುಮಾರ್ ಮತ್ತು ಮುಖ್ಯ ಸಹಾಯಕ ವೀರೇಂದ್ರ ಕುಮಾರ್ ಅವರು ಬ್ಯಾಂಕ್ ಖಾತೆಯನ್ನು ನಿರ್ವಹಿಸಲಿದ್ದಾರೆ.

ಆದರೆ ಸ್ವಯಂಪ್ರೇರಿತ ಸಂಗ್ರಹ ಎಂದು ಹೇಳಲಾಗುತ್ತಿರುವ ಈ ಸಂಗ್ರಹಕ್ಕೆ ತಮ್ಮ ಅನುಮತಿಯನ್ನು ಕೇಳಲಿಲ್ಲ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ತಿಳಿಸಿದ್ದಾರೆ. “ನಮ್ಮಲ್ಲಿ ಯಾರೊಬ್ಬರ ಬಳಿಯೂ ಅನುಮತಿ ಪಡೆದು ಈ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ರಾಜ್‌ಪಾಲ್ ಸಿಂಗ್ ಅವರು ಬ್ಯಾಂಕ್‌ಗೆ ಸಲ್ಲಿಸಿದ್ದ ಅರ್ಜಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವಾಗ ನಮಗೆ ಈ ವಿಷಯ ತಿಳಿದುಬಂದಿದೆ. ಒಂದು ದಿನದ ವೇತನವನ್ನು ವಿಧಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ”. ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಈ ಕ್ರಮದ ಬಗ್ಗೆ ತೀವ್ರ ವಿರೋಧವಿದ್ದರೂ ರಾಜಕೀಯ ವಾತಾವರಣ ಮತ್ತು ಮುಂದೆ ಉಂಟಾಗಲಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನವರು ಪ್ರತಿಕ್ರಿಯಿಸಲು ಹೆದರುತ್ತಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp