ಇನಾಯತ್ ಅಲಿಗೆ ಮಂಗಳೂರು ಉತ್ತರ ಕಾಂಗ್ರೆಸ್ ಟಿಕೆಟ್

Prasthutha|

- Advertisement -

►ಮೊಯ್ದಿನ್ ಬಾವಾಗೆ ‘ಕೈ’ ತಪ್ಪಿದ ಟಿಕೆಟ್

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್’ನ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್ ಅಲಿ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಕ್ಷೇತ್ರದಲ್ಲಿ ಇನಾಯತ್ ಅಲಿ ಮತ್ತು ಮೊಯ್ದೀನ್ ಬಾವ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಈ ಸ್ಪರ್ಧೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಇನಾಯತ್ ಅಲಿ ಜಯಗಳಿಸಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಟಿಕೆಟ್ ವಂಚಿತ ಮೊಯ್ದೀನ್ ಬಾವ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

- Advertisement -

ಯಾರು ಈ ಇನಾಯತ್ ಅಲಿ ?

ಅಪ್ಪಟ ಜಾತ್ಯತೀತ ಮನೋಭಾವದ ಇನಾಯತ್ ಅಲಿ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿ ದಿಸೆಯಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ NSUI ಮೂಲಕ ಹಲವಾರು ವಿದ್ಯಾರ್ಥಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣುತ್ತಿದ್ದ ಇನಾಯತ್ ಅವರು ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಸೇವೆಗೈದ ಕಟ್ಟಾ ಕಾಂಗ್ರೆಸಿಗ.
ಮೊದಲ ಬಾರಿ 1997 ನೇ ಇಸವಿಯಲ್ಲಿ NSUI ನ ಬ್ಲಾಕ್ ಅಧ್ಯಕ್ಷರಾಗಿ ಆಯ್ಕೆಯಾದ ಇವರು ನಂತರದಲ್ಲಿ 2000ನೇ ಇಸವಿಯಲ್ಲಿ NSUI ರಾಜ್ಯ ಉಪಾಧ್ಯಕ್ಷನಾಗಿ, 2003 ರಲ್ಲಿ NSUI ರಾಷ್ಟ್ರೀಯ ಕಾರ್ಯದರ್ಶಿಯಾಗಿ, 2005 ರಲ್ಲಿ NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, 2009 ರಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಸ್ತುತ KPCC ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುದ್ದೆ ಮಾತ್ರವಲ್ಲದೆ NSUI ನ ರಾಜ್ಯ ಉಸ್ತುವಾರಿಯಾಗಿ ಕಾಂಗ್ರೆಸ್ ಪಕ್ಷದ ಸೇವೆಗೈಯುತ್ತಿದ್ದಾರೆ.


ವೃತ್ತಿಯಲ್ಲಿ ಇನಾಯತ್ ಅಲಿ ಅವರು ಒಬ್ಬ ಯಶಸ್ವಿ ಉದ್ಯಮಿಯೂ ಹೌದು. ಇವರು ಈ ಹಿಂದಿನಿಂದಲೂ ಪ್ರತಿಫಲಾಪೇಕ್ಷೆ ಬಯಸದೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು.
ತನ್ನ ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ನೋಂದಾಯಿತ ಐಎಎಮ್ ಫೌಂಡೇಶನ್ ಸಂಸ್ಥೆಯನ್ನು ಸ್ಥಾಪಿಸಿ ಸಂಸ್ಥೆಯ ಮೂಲಕ ಕಳೆದ ಹಲವಾರು ವರ್ಷಗಳಿಂದ ಬಡಜನರ ಶೈಕ್ಷಣಿಕ, ಆರೋಗ್ಯ, ವಸತಿ ಇತ್ಯಾದಿ ಅಗತ್ಯಗಳಿಗೆ ಸ್ಪಂದಿಸಿದ್ದಾರೆ ಹಾಗೂ ಅದೆಷ್ಟೋ ಬಡ ಕುಟುಂಬದ ಯುವತಿಯರ ವಿವಾಹ ಕಾರ್ಯದಲ್ಲಿ ಜಾತಿ-ಮತ ನೋಡದೆ ಸಹಾಯ ಮಾಡಿರುತ್ತಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲೂ ವರ್ಷಗಳಿಂದ ನಿರಂತರವಾಗಿ ತನ್ನ ಸೇವಾ ಚಟುವಟಿಕೆಗಳ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿರುತ್ತಾರೆ.
ಕೊರೋನ ಸಂಧರ್ಭದಲ್ಲೂ ಆರ್ಥಿಕವಾಗಿ ಕಂಗೆಟ್ಟಿದ್ದ ಅದೆಷ್ಟೋ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ.
ಸ್ನೇಹಮಯಿ, ಸದಾ ಹಸನ್ಮುಖಿ ಮತ್ತು ಸಂವೇದನಾಶೀಲ ಗುಣವುಳ್ಳ ವ್ಯಕ್ತಿತ್ವ ಇನಾಯತ್ ಅಲಿ ಅವರದ್ದಾಗಿದೆ. ಇವರು ರಾಜಕೀಯ, ಸಾಮಾಜಿಕ ರಂಗದಲ್ಲಿ ಸಾಕಷ್ಟು ಅನುಭವವನ್ನು ಹೊಂದಿರುತ್ತಾರೆ.
ತನ್ನ ಸೇವಾ ಚಟುವಟಿಕೆಗಳ ಮೂಲಕ ಹೆಸರಾಗಿರುವ ಇವರು ಈ ಬಾರಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದ್ದಾರೆ ಎಂದು ರಾಜಕೀಯ ತಜ್ಞರ ಅಭಿಪ್ರಾಯ.



Join Whatsapp