ಬೆಂಗಳೂರು: ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭಗೊಂಡಿದ್ದು, ಹಲವು ವಿಧಾನ ಪರಿಷತ್ ಸದಸ್ಯರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪರಿಷತ್’ನಲ್ಲಿ ಬಿಜೆಪಿ ಬಹುಮತವನ್ನು ಕಳೆದುಕೊಂಡಿದೆ
ಎಂಎಲ್ ಸಿ ಸ್ಥಾನಕ್ಕೆ ಆರ್. ಶಂಕರ್ ರಾಜೀನಾಮೆ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ 75 ಸದಸ್ಯರ ಪರಿಷತ್’ನಲ್ಲಿ ಬಿಜೆಪಿ ಸಂಖ್ಯೆ 36ಕ್ಕೆ ಕುಸಿದಿದೆ. ಮೇಲ್ಮನೆಯಲ್ಲಿ ಬಹುಮತಕ್ಕೆ 38 ಸ್ಥಾನಗಳ ಅಗತ್ಯವಿದೆ.
ಅಥಣಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ಎಂಎಲ್ ಸಿ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರಿಂದ ಬಿಜೆಪಿ ಸದಸ್ಯರ ಸಂಖ್ಯೆ 35ಕ್ಕೆ ಇಳಿಯುವ ಸಾಧ್ಯತೆಯಿದೆ.
ಬಿಜೆಪಿಯ 224 ಅಭ್ಯರ್ಥಿಗಳ ಪಟ್ಟಿಯು ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಬೇಕಿದ್ದು, ಮೂರನೇ ಪಟ್ಟಿ ಹೊರ ಬಿದ್ದ ನಂತರ, ಮೇಲ್ಮನೆಯಲ್ಲಿ ಪಕ್ಷದ ಬಲ ಮತ್ತಷ್ಟು ಕಡಿಮೆಯಾಗಬಹುದು ಎನ್ನಲಾಗಿದೆ.
ಈ ಮೊದಲು ಬಿಜೆಪಿ ಸದಸ್ಯರ ಬಲ 39 ಆಗಿತ್ತು. ಎಂಎಲ್‌ಸಿಗಳಾದ ಪುಟ್ಟಣ್ಣ ಮತ್ತು ಬಾಬು ರಾವ್ ಚಿಂಚನಸೂರ್ ಮಾರ್ಚ್‌ನಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ತಾಂತ್ರಿಕವಾಗಿ ಚಿಂಚನಸೂರ್ ರಾಜೀನಾಮೆ ಸಲ್ಲಿಸಿದಾಗ ಬಿಜೆಪಿ ಬಹುಮತ ಕಳೆದುಕೊಂಡಿತ್ತು.
2019ರಲ್ಲಿ ಬಿಜೆಪಿ ಸರ್ಕಾರ ರಚಿಸಿದರೂ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಬಹುಮತ ಪಡೆದಿದ್ದವು. ಕಳೆದ ವರ್ಷ ಜೂನ್ ನಲ್ಲಿ ಮಾತ್ರ ಬಿಜೆಪಿ ಪರಿಷತ್ತಿನಲ್ಲಿ ಸ್ಪಷ್ಟ ಬಹುಮತ ಪಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಪರಿಷತ್ತಿನಲ್ಲಿ ಮತಾಂತರ ವಿರೋಧಿ ಮಸೂದೆಯಂತಹ ಕೆಲವು ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಲು ಇದು ಪಕ್ಷಕ್ಕೆ ಸಹಾಯ ಮಾಡಿತ್ತು. ಆದರೆ ಚುನಾವಣೆಯ ಹೊಸ್ತಿಲಿನಲ್ಲಿ ಇದೀಗ ಮತ್ತೆ ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಂಡಿದೆ.