ಬಂಟ್ವಾಳ : ಸಾಮಾಜಿಕ ಬದ್ಧತೆಯ ಸೈದ್ಧಾಂತಿಕ ರಾಜಕಾರಣ ಮಾಡಿಕೊಂಡು ಬಂದವನು ನಾನು. ಯಾವುದೇ ಧರ್ಮ, ಜಾತಿಯ ತಾರತಮ್ಯ ಮಾಡದೆ ಎಲ್ಲಾ ವರ್ಗಗಳನ್ನು ಸಮಾನತೆಯಿಂದ ನೋಡಿದವನು. ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನಸೇವೆ ಮಾಡುತ್ತೇನೆ ಎಂದು ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಭರವಸೆ ನೀಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ತಮ್ಮ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಸಿ. ರೋಡ್ ನ ಪದ್ಮ ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ಧನಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ರಮಾನಾಥ ರೈ ಅವರ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಲಾಯಿತು.
ಮತದಾನದ ದಿನಕ್ಕೆ ಇನ್ನು ಕೇವಲ 27 ದಿನಗಳು ಬಾಕಿಯುಳಿದಿದ್ದು ಕಾರ್ಯಕರ್ತರು ಅವಿರತ ಶ್ರಮಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕರಿಸಬೇಕು ಎಂದು ಅವರು ವಿನಂತಿಸಿದರು.
ಪಕ್ಷದ ಹಿರಿಯ ಮುಖಂಡರುಗಳಿಂದ ಕಚೇರಿ ಉದ್ಘಾಟಿಸಲಾಯಿತು. ಜನಾರ್ದನ ಶೆಟ್ಟಿ ಮೊಡಂಕಾಪುಗುತ್ತು, ರಾಮಣ್ಣ ಪೂಜಾರಿ ಕಂಗಿಹಿತ್ತಿಲು, ಜಿನರಾಜ ಆರಿಗ ಕಾರಿಂಜ, ಹಾಜಿ ಬಿ.ಎಂ. ಖಾದರ್ ಬಂಟ್ವಾಳ, ನಿವೃತ್ತ ಯೋಧ ವಲೇರಿಯನ್ ಡಿಸೋಜ, ಬೇಬಿ ನಾಯಕ್ ಸಜೀಪಮುನ್ನೂರು, ಬಾಳಪ್ಪ ಶೆಟ್ಟಿ ವಗೆನಾಡು ಕರೋಪಾಡಿ ಮುಂತಾದ ಏಳು ಮಂದಿ ವಿವಿಧ ಸಮುದಾಯಗಳ ಹಿರಿಯರಿಂದ ಕಚೇರಿ ಉದ್ಘಾಟಿಸಿದುದು ವಿಶೇಷವಾಗಿತ್ತು.
ಕಾರ್ಯಕ್ರಮ ಸ್ವಾಗತ ಮತ್ತು ನಿರೂಪಣೆಯನ್ನು ಬಾಲಕೃಷ್ಣ ಆಳ್ವ ಕೊಡಾಜೆ ನಿರ್ವಹಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ ಧನ್ಯವಾದ ಸಲ್ಲಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕೆ.ಪಿ.ಸಿ.ಸಿ. ಸದಸ್ಯರುಗಳಾದ ಪಿಯೂಸ್ ಎಲ್. ರಾಡ್ರಿಗಸ್, ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ ಜೈನ್ ಮತ್ತಿತರ ವಿವಿಧ ಘಟಕಗಳ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ಇಬ್ರಾಹೀಂ ಕೈಲಾರ ಕಾಂಗ್ರೆಸ್ ಸೇರ್ಪಡೆಗೊಂಡರು.