ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯ ಬೆನ್ನಲ್ಲಿಯೇ ಅಸಮಾಧಾನ ಭುಗಿಲೆದ್ದಿದ್ದು, ರಾಜೀನಾಮೆ ಪರ್ವ ಆರಂಭಗೊಂಡಿದೆ.
ಇದೀಗ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿಗೆ ರಾಜೀನಾಮ ನೀಡಿದ್ದಾರೆ. ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೊಗಡು ಶಿವಣ್ಣ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಇ ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಇವತ್ತು ರಾಜಕೀಯಕ್ಕೆ ಬೇಕಾಗಿರುವುದು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಎಂದು ಬಿಜೆಪಿ ನಾಯಕರ ಮೇಲೆ ಬೇಸರ ವ್ಯಕ್ತಪಡಿಸಿದರು.
ಆರ್ ಎಸ್ ಎಸ್ ಹಿನ್ನೆಲೆಯುಳ್ಳ ಸೊಗಡು ಶಿವಣ್ಣ ಅವರು ತುಮಕೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಸಂಸದ ಜಿಎಸ್ ಬಸವರಾಜು ಅವರ ಪುತ್ರ ಹಾಲಿ ಶಾಸಕ ಜಿಬಿ ಜ್ಯೋತಿ ಗಣೇಶ್ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಈ ಸಲ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಸೊಗಡು ಶಿವಣ್ಣ ಇದ್ದರು. ಆದರೆ, ಮತ್ತೊಮ್ಮೆ ಜ್ಯೋತಿ ಗಣೇಶ್ ಅವರಿಗೆ ತುಮಕೂರು ನಗರ ಟಿಕೆಟ್ ನೀಡಿದ್ದರಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.