ಲಕ್ನೋ: ರಾಜಕಾರಣಿಯಾಗಿ ಬದಲಾಗಿದ್ದ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಅವರನ್ನು ಉತ್ತರ ಪ್ರದೇಶದ ಪೊಲೀಸರು ಗುರುವಾರ ಪ್ರಯಾಗ್ ರಾಜ್ ಕೋರ್ಟಿಗೆ ಹಾಜರುಪಡಿಸಿ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದರು. ಪೊಲೀಸ್
ಬುಧವಾರ ಅತೀಕ್’ರನ್ನು ಗುಜರಾತ್ ಜೈಲಿನಿಂದ ಎರಡನೆಯ ಬಾರಿ ಇಲ್ಲಿಯ ನೈನಿ ಜೈಲಿಗೆ ತರಲಾಗಿತ್ತು. ಗುರುವಾರ ಚೀಫ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ದಿನೇಶ್ ಗೌತಂ ಎದುರು ಅವರನ್ನು ಹಾಜರುಪಡಿಸಲಾಯಿತು.
ಆತಿಕ್ ಅವರ ಸಹೋದರ ಖಾಲಿದ್ ಅಝೀಂ ಅಲಿಯಾಸ್ ಅಶ್ರಫ್ ಅವರನ್ನು ಸಹ ಬರೈಲಿಯ ಜೈಲಿನಿಂದ ನೈನಿ ಜೈಲಿಗೆ ತರಲಾಗಿದೆ.
ಬಿಎಸ್ ಪಿ ಶಾಸಕರಾಗಿದ್ದ ರಾಜು ಪಾಲ್ ಕೊಲೆಯಲ್ಲಿ ಮುಖ್ಯ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಮತ್ತವರ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಪ್ರಯಾಗ್ ರಾಜ್ ನ ದೂಮನ್ಗಂಜ್ ನಲ್ಲಿ ಫೆಬ್ರವರಿ 24ರಂದು ಕೊಲೆ ಮಾಡಲಾಗಿತ್ತು. ಉಮೇಶ್ ಅವರ ಪತ್ನಿ ಜಯ ಪಾಲ್ ಅವರು ನೀಡಿದ ದೂರಿನ ಮೇಲೆ ಅತೀಕ್, ಅಶ್ರಫ್, ಶೈಸ್ತಾ ಪರ್ವೀನ್, ಇಬ್ಬರು ಗಂಡು ಮಕ್ಕಳು, ಸಹಾಯಕರಾದ ಗುಡ್ಡು ಮುಸ್ಲಿಂ, ಗುಲಾಂ ಮತ್ತು ಇತರ 9 ಮಂದಿಯ ಮೇಲೆ ಎಫ್’ಐಆರ್ ದಾಖಲಾಗಿದೆ.
ಗಲಭೆ 147, ಮಾರಣಾಂತಿಕ ಆಯುಧಗಳೊಂದಿಗೆ ಗಲಭೆ 148, ಕಾನೂನುಬಾಹಿರ ಗುಂಪು ಅಪರಾಧ 149, ಕೊಲೆ 302, ಕೊಲೆ ಯತ್ನ 307, ಕ್ರಿಮಿನಲ್ ಉದ್ದೇಶ 506, ಹಲವರು ಸೇರಿ ಮಾಡಿದ ಅಪರಾಧ 34, ಕ್ರಿಮಿನಲ್ ಸಂಚು 120 ಬಿ ಮೊದಲಾದ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ಹೂಡಲಾಗಿದೆ.
ಅಹಮದಾಬಾದಿನ ಸಬರಮತಿ ಜೈಲಿನಿಂದ ಬುಧವಾರ ರಸ್ತೆ ಹಾದಿಯಾಗಿ ಭಾರೀ ಭದ್ರತೆಯಲ್ಲಿ ಸಂಜೆ ಆರು ಗಂಟೆಗೆ ಅತೀಕ್ ರನ್ನು ನೈನಿ ಜೈಲು ತಲುಪಿಸಲಾಯಿತು.
ಆತಿಕ್ 60ರ ಪ್ರಾಯದ ಸಮಾಜವಾದಿ ಪಕ್ಷದ ಮಾಜಿ ಸಂಸದರು. ನಡುವೆ ಪೊಲೀಸ್ ವ್ಯಾನಿನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ಆತಿಕ್ ಅವರು, ಕಾರಣವಿಲ್ಲದೆ ನನ್ನ ಇಡೀ ಕುಟುಂಬವನ್ನು ವಿನಾ ಕಾರಣ ಮೊಕದ್ದಮೆಯಲ್ಲಿ ಸೇರಿಸಲಾಗಿದೆ ಎಂದು ದೂರಿದರು.
2006ರಲ್ಲಿ ಅತೀಕ್ ಮತ್ತು ಅವರ ಸಹಚರರು ಉಮೇಶ್ ಪಾಲ್ ರನ್ನು ಅಪಹರಿಸಿ, ಸಾಕ್ಷ್ಯ ನೀಡದಂತೆ ಒತ್ತಾಯಿಸಿದ್ದರು ಎಂದು ಆರೋಪ ಮಾಡಲಾಗಿದೆ.
ಮೋಹಿತ್ ಜೈಸ್ವಾಲ್ ಎಂಬ ಉದ್ಯಮಿಯನ್ನುಅಪಹರಿಸಿ ಬೆದರಿಸಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಭಾರೀ ಭದ್ರತೆಯ ಗುಜರಾತಿನ ಸಬರಮತಿ ಜೈಲಿಗೆ ಅತೀಕ್ ರನ್ನು ಸಾಗಿಸುವಂತೆ ಆದೇಶ ನೀಡಿತ್ತು. ಅತೀಕ್ ಅಹ್ಮದ್ ಮೇಲೆ 100ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಹೂಡಲಾಗಿದೆ.