ಬೆಂಗಳೂರು: ಕಾರು ನಿಲ್ಲಿಸಿ ದಾಖಲೆ ಕೇಳಿದ್ದಕ್ಕೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ಹೈ ಡ್ರಾಮಾ ಮಾಡಿ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಘಟನೆ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಂಚಾರ ಪೊಲೀಸರು ಯುವತಿಯೊಬ್ಬಳ ಕಾರೊಂದನ್ನು ನಿಲ್ಲಿಸಿ ದಾಖಲೆ ಪರಿಶೀಲನೆಗೆ ಮುಂದಾದಾಗ ಆಕೆ ಪೊಲೀಸರ ವಿರುದ್ಧ ರೊಚ್ಚಿಗೆದ್ದು ಹೈಡ್ರಾಮಾ ಮಾಡಿದ್ದಾಳೆ.
ಪೊಲೀಸರು ರಸ್ತೆಯಲ್ಲಿ ವಾಹನವನ್ನು ಅಡ್ಡ ಹಾಕುತ್ತಿದ್ದಂತೆ ಮಹಿಳೆ ‘ವಾಟ್ ಆರ್ ಯು ಡೂಯಿಗ್ ನಾನ್ಸೆನ್ಸ್’ ಎಂದು ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಈ ವೇಳೆ ಪೊಲೀಸರು ಗಾಡಿಯ ದಾಖಲೆ ನೀಡುವಂತೆ ಕೇಳಿದಾಗ ಆಕೆ ‘ತಗೊಳ್ಳಿ ಇದು ಪೇಪರ್ ತಗೊಳ್ಳಿ ಇದು ಪೇಪರ್ ‘ಎಂದು ಕಾರೊಳಗಿದ್ದ ಪೇಪರ್ ಹಾಗೂ ಇತರ ವಸ್ತುಗಳನ್ನು ಒಂದೊಂದಾಗಿ ಹೊರಗೆಸೆದು ಉದ್ಧಟತನ ತೋರಿದ್ದಾಳೆ. ಅಲ್ಲದೇ ಪೊಲೀಸರ ಮುಂದೆಯೇ ನೀವು ನನಗೆ ತೊಂದರೆ ಕೊಡುತ್ತಿದ್ದೀರಿ ಎಂದು ದೂರಿದ್ದಾಳೆ.
ಈ ವೇಳೆ ಕಾರಿನ ಹಿಂದಿನ ಸೀಟಿನಲ್ಲಿದ್ದ ಯುವತಿಯೊಬ್ಬಳು ಕೆಳಗಿಳಿದು ಆಕೆ ಎಸೆದ ವಸ್ತು ಹಾಗೂ ಪೇಪರ್’ಗಳನ್ನು ರಸ್ತೆಯಿಂದ ಹೆಕ್ಕಿ, ಪೇಪರ್ ಬಿಸಾಕಿದಾಕೆಗೆ ನೀನೇನು ಮಾಡ್ತಿದ್ದೀಯಾ ಎಂದು ಕೇಳುತ್ತಾಳೆ. ಈ ವೇಳೆ ಆ ಯುವತಿಯ ಕೋಪ ಮತ್ತಷ್ಟು ಹೆಚ್ಚಾಗಿದ್ದು, ಆಕೆ ಕಾರಿನಿಂದ ಇಳಿದವಳೇ.. ಏನು ಹೇಳುತ್ತಾಳೆ ಎಂದು ಕೇಳಿಸದಷ್ಟು ಅಸ್ಪಷ್ಟವಾಗಿ ಜೋರಾಗಿ ಕಿರುಚಾಡುತ್ತಾ ಅಲ್ಲೇ ರಸ್ತೆಯಲ್ಲಿ ಕಾರಿಗೆ ಒರಗಿ ಕುಳಿತು ಗೊಳೋ ಎಂದು ಅಳಲು ಶುರು ಮಾಡುತ್ತಾಳೆ. ಈ ವೇಳೆ ಆಕೆಯ ಕಾರಿನಲ್ಲಿದ್ದ ಮತ್ತೊಬ್ಬಳು ಏನು ಮಾಡ್ತಿದ್ದೀಯಾ ಎಂದು ಕೇಳಿದಾಗಲೂ ಆಕೆಯ ಗೋಳಾಟ ಮುಂದುವರೆದಿದೆ. ಈ ವೇಳೆ ಪೊಲೀಸರು ಕಾರನ್ನು ಪಕ್ಕಕ್ಕೆ ಹಾಕಿ ಕಾರಿನ ದಾಖಲೆ ತೋರಿಸುವಂತೆ ಹೇಳಿದ್ದಾರೆ.
ಟ್ವಿಟ್ಟರ್ ಪೇಜ್’ನಿಂದ ಈ ವಿಡಿಯೋ ಪೋಸ್ಟ್ ಆಗಿದ್ದು, 45 ಸೆಕೆಂಡ್’ಗಳ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೆಲವರು ಇದಕ್ಕೆ ಹ್ಯಾಪಿ ವುಮೆನ್ಸ್ ಡೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಂತಹ ಮಹಿಳೆಯರನ್ನು ಇಂಡಿಯಾ ಗೇಟ್ ಬಳಿ ಹಕ್ಕಿ ಗೂಡಿಗೆ ಹಾಕಿ ಒಂದು ವರ್ಷ ಕಾಲ ಹಾಗೆ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕೆ ಪೊಲೀಸರು ಇಂತಹ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಲು ಅಸಹಾಯಕರಾಗಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.