ಚಿಕ್ಕಮಗಳೂರು: ಬೈಕ್’ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರನ್ನು ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಿದ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಚಿಕ್ಕಮಗಳೂರು ತಾಲೂಕಿನ ಚಂದ್ರುಳ್ಳಿಬಿದರೆ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಚಂದ್ರುಳ್ಳಿಬಿದರೆ ಗ್ರಾಮದ ಪ್ರಕಾಶ್ ಹಾಗೂ ಪ್ರವೀಣ್ ಹತ್ಯೆಗೀಡಾದವರು. ಚಿಕ್ಕಮಗಳೂರು ತಾಲೂಕಿನ ಉಜ್ಜಯಿನಿ ಗ್ರಾಮದ ರಮೇಶ್ ಎಂಬಾತ ಕೋವಿಯಿಂದ ಗುಂಡುಹಾರಿಸಿ ಹತ್ಯೆಗೈಗೈದಿದ್ದಾನೆ ಎಂದು ತಿಳಿದುಬಂದಿದೆ.
ಗುಂಡಿನದಾಳಿ ನಡೆಸಿದ ರಮೇಶ್ ಹಾಗೂ ಸಾವನ್ನಪ್ಪಿದ ಪ್ರಕಾಶ್, ಪ್ರವೀಣ್ ಎಲ್ಲರೂ ಸಂಬಂಧಿಕರು ಎಂದು ಹೇಳಲಾಗುತ್ತಿದೆ. ಆದರೆ, ಗುಂಡಿನ ದಾಳಿ ನಡೆಸಿದ ರಮೇಶ್’ಗೆ ಬಂದೂಕು ಎಲ್ಲಿಂದ ಸಿಕ್ಕಿತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಬೆಳೆ ಹಾಗೂ ಪ್ರಾಣ ರಕ್ಷಣೆಗೆ ಬೆಳೆಗಾರರು ಗನ್ ಇಟ್ಟುಕೊಂಡಿರುತ್ತಾರೆ. ಅದೇ ಬಂದೂಕು ಅಥವಾ ಯಾವ ಬಂದೂಕು ಪರವಾನಗಿ ಇದೆಯಾ ಎಂಬೆಲ್ಲಾ ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಹಾಡಹಗಲೇ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಸುತ್ತಮುತ್ತಲಿನ ಜನ ಕೂಡ ಆತಂಕಗೊಂಡಿದ್ದಾರೆ. ಗುಂಡಿನದಾಳಿ ನಡೆಸಿದ ರಮೇಶ್ ನನ್ನ ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.