ನವದೆಹಲಿ: ಲಖಿಂಪುರ ಖೇರಿ ಪ್ರಕರಣದ ಪ್ರಮುಖ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ ಬುಧವಾರ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.
ಮಧ್ಯಂತರ ಜಾಮೀನಿನ ಒಂದು ವಾರದೊಳಗೆ ಉತ್ತರ ಪ್ರದೇಶ ತೊರೆಯುವಂತೆ ಮಿಶ್ರಾ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಮಧ್ಯಂತರ ಜಾಮೀನು ಅವಧಿಯಲ್ಲಿ ಉತ್ತರ ಪ್ರದೇಶ ಅಥವಾ ದೆಹಲಿಯ ಕೇಂದ್ರಾಡಳಿತ ಪ್ರದೇಶದಲ್ಲಿ ಉಳಿಯದಂತೆ ನಿರ್ದೇಶನ ನೀಡಿದೆ.
ಬಿಡುಗಡೆ ಬಳಿಕ ಉತ್ತರ ಪ್ರದೇಶ ಅಥವಾ ದೆಹಲಿಯಲ್ಲಿ ಮಿಶ್ರಾ ಇರುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಆದೇಶಿಸಿದೆ. ಮಾರ್ಚ್ 14 ರಂದು ನ್ಯಾಯಾಲಯ ಮತ್ತೆ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ.
ಮಿಶ್ರಾ ತನ್ನ ಪಾಸ್ ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸಬೇಕು ಮತ್ತು ವಿಚಾರಣಾ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗಲು ಮಾತ್ರ ಯುಪಿ ರಾಜ್ಯವನ್ನು ಪ್ರವೇಶಿಸಬಹುದು. ನೇರವಾಗಿ ಅಥವಾ ಪರೋಕ್ಷವಾಗಿ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು ಅಥವಾ ಬೆದರಿಸಬಾರದು. ಅವರ ಕುಟುಂಬ ಸದಸ್ಯರು ಅಥವಾ ಬೆಂಬಲಿಗರು ಈ ರೀತಿಯ ಕೃತ್ಯ ಮಾಡಿದರೆ ಜಾಮೀನನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಸಿದೆ.