ಹಾಸನ: ಇಡೀ ರಾಜ್ಯದ ಜನತೆಯ ಆತಂಕಕ್ಕೆ ಕಾರಣವಾಗಿದ್ದ ಕೊರಿಯರ್ ಶಾಪ್ ನಲ್ಲಿ ನಡೆದ ಮಿಕ್ಸಿ ಬ್ಲಾಸ್ಟ್ ಪ್ರಕರಣ ಹೊಸ ತಿರುವು ಪಡೆದಿದ್ದು, ಪ್ರೀತಿ ನಿರಾಕರಿಸಿದ ಮಹಿಳೆಯನ್ನು ಯುವಕನೊಬ್ಬ ಕೊಲೆ ನಡೆಸಲು ಸಂಚು ರೂಪಿಸಿದ ಘಟನೆ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ…
ಯುವಕ ತನ್ನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ ಮಹಿಳೆಯ ವಿಳಾಸಕ್ಕೆ ಎರಡುಬಾರಿ ತನ್ನ ವಿಳಾಸ ಬರೆಯದೆ ಕೊರಿಯರ್ ಮೂಲಕ ಕೆಲ ವಸ್ತುಗಳನ್ನು ಕಳಿಸಿದ್ದನು. ಅಡ್ರೆಸ್ ಇಲ್ಲದೇ ತನಗೆ ಬಂದ ಎಲ್ಲಾ ಕೊರಿಯರ್ ಗಳನ್ನು ಮಹಿಳೆ ಕಸದ ಬುಟ್ಟಿಗೆ ಹಾಕಿದ್ದಳು. ಮೂರನೇ ಬಾರಿ ಆಕೆಯನ್ನೇ ಮುಗಿಸೋಕೆ ಪ್ಲಾನ್ ಮಾಡಿ ಮಿಕ್ಸಿಯೊಳಗೆ ಸ್ಪೋಟಕ ಇಟ್ಟು ಕೊರಿಯರ್ ಮಾಡಿದ್ದನು. ಆದರೆ, ಯಾರು ಕಳಿಸಿದ್ದಾರೆ ಎನ್ನುವ ನಿರ್ದಿಷ್ಟ ವಿಳಾಸ ಇಲ್ಲದ ಕೊರಿಯರ್ ತನಗೆ ಬೇಡ ಎಂದು ಮಹಿಳೆ ವಾಪಸ್ ಕೊರಿಯರ್ ಶಾಪ್ ಗೆ ಹಿಂದಿರುಗಿಸಿ ಹೋಗಿದ್ದಳು.
ಮಹಿಳೆಯು ತನಗೆ ಬಂದಿದ್ದ ಕೋರಿಯರ್ ಅನ್ನು ವಾಪಸ್ ನೀಡಿದ್ದರಿಂದ ಅದನ್ನು ವಾಪಸ್ ಕಳುಹಿಸಲು 350 ರೂ. ಶುಲ್ಕ ಆಗುತ್ತದೆ ಎಂದು ಕೊರಿಯರ್ ಮಳಿಗೆಯ ಮಾಲೀಕ ಶಶಿ ಕೇಳಿದ್ದಾರೆ. ಆದರೆ ಮಹಿಳೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಅದನ್ನ ಓಪನ್ ಮಾಡಿ ಪರಿಶೀಲನೆ ನಡೆಸಿದ್ದನು. ಮಿಕ್ಸಿ ಪರಿಶೀಲನೆ ವೇಳೆ ಬ್ಲಾಸ್ಟ್ ಆಗಿ ಕೊರಿಯರ್ ಶಾಪ್ ಮಾಲೀಕ ಗಂಭೀರ ಗಾಯಗೊಂಡಿದ್ದಾನೆ. ಮಿಕ್ಸಿಯೊಳಗೆ ಸಣ್ಣ ಪ್ರಮಾಣದ ಸ್ಪೋಟಕ ಇಟ್ಟು ಅದನ್ನ ಆನ್ ಮಾಡಿದರೆ ಬ್ಲಾಸ್ಟ್ ಆಗುವಂತೆ ಯುವಕ ಪ್ಲಾನ್ ಮಾಡಿದ್ದನು.