ಕಳೆದ 10 ತಿಂಗಳಿಂದ ಮೀನುಗಾರರಿಗೆ ಸೀಮೆಎಣ್ಣೆ ನೀಡಿಲ್ಲ, ಅವರೆಲ್ಲ ಮೀನು ಹಿಡಿಯುವುದು ಹೇಗೆ?: ಸಿದ್ದರಾಮಯ್ಯ

Prasthutha|

ಬೆಂಗಳೂರು: ಕರಾವಳಿಯ ಮೀನುಗಾರರಿಗೆ ತಕ್ಷಣ ಸೀಮೆಎಣ್ಣೆ ಹಂಚಿಕೆ ಮಾಡುವಂತೆ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.

- Advertisement -

ಸೀಮೆಎಣ್ಣೆ ನೀಡದೆ ಹೋದರೆ ಮೀನುಗಾರರು ಬದುಕುವುದು ಹೇಗೆ? ಸಚಿವರು ತಾವು ಮುಖ್ಯಮಂತ್ರಿಗಳ ಜೊತೆ ಮಾತಾಡಿದ್ದೇನೆ, ಕೇಂದ್ರ ಸರ್ಕಾರದ ಜೊತೆ ಮಾತಾಡಿದ್ದೇನೆ ಎಂದರೆ ಆಗಲ್ಲ. ಕೇಂದ್ರ ಸರ್ಕಾರ ಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಕೈಗಾರಿಕೆಗಳಿಗೆ ನೀಡುವ ಸೀಮೆಎಣ್ಣೆಯನ್ನು ಮೀನುಗಾರಿಕಾ ದೋಣಿಗಳಿಗೆ ಹಂಚಿಕೆ ಮಾಡುತ್ತೇವೆ ಎಂದು ಹೇಳುವುದು ನೀರ ಮೇಲಿನ ಗುಳ್ಳೆಯ ಹಾಗೆ, ಬಂದಷ್ಟು ದಿನ ಬಂತು, ಹೋದರೆ ಹೋಯಿತು. ಸುಮಾರು 800 ಕ್ಕೂ ಅಧಿಕ ಮೀನುಗಾರಿಕಾ ನಾಡ ದೋಣಿಗಳು ಇವೆ. ಇದನ್ನು ನಂಬಿಕೊಂಡಿರುವ ಕುಟುಂಬಗಳು ಸಾಕಷ್ಟಿವೆ. ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತರುವ ಕೆಲಸ ಮಾಡಬೇಕಿತ್ತು ಅಥವಾ ರಾಜ್ಯದಲ್ಲೇ ಬದಲಿ ವ್ಯವಸ್ಥೆಯನ್ನಾದರೂ ಮಾಡಬೇಕಾಗಿತ್ತು ಎಂದು ಹೇಳಿದರು.

ಕಳೆದ 10 ತಿಂಗಳಿಂದ ಸೀಮೆಎಣ್ಣೆಯನ್ನು ನೀಡಿಲ್ಲ, ಅವರೆಲ್ಲ ಮೀನು ಹಿಡಿಯುವುದು ಹೇಗೆ? ಇಷ್ಟು ಸಮಯದಿಂದ ಸರ್ಕಾರ ನಿದ್ದೆ ಮಾಡುತ್ತಿದೆಯಾ? ತಿಂಗಳಿಗೆ ಕನಿಷ್ಠ 300 ಲೀಟರ್ ಕೊಡಬೇಕಿತ್ತು, ಅಂದರೆ ಒಟ್ಟಾರೆ 3000 ಲೀಟರ್ ಕೊಡುವುದು ಬಾಕಿ ಇದೆ. ಹೀಗಾದರೆ ನಾಡ ದೋಣಿ ನಡೆಸುವ ಮೀನುಗಾರರು ಏನು ಮಾಡಬೇಕು? ಈ ಕೂಡಲೇ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ಶೀಘ್ರದಲ್ಲಿ ಕೊಡ್ತೇವೆ ಎಂದರೆ ಆಗಲ್ಲ, ಯಾವಾಗ ಕೊಡುತ್ತೀರ ಎಂಬುದನ್ನು ಸಚಿವರು ಸದನಕ್ಕೆ ಸ್ಪಷ್ಟವಾಗಿ ಹೇಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.



Join Whatsapp