ಬೆಂಗಳೂರು: ಡಾ| ಬಿ.ಆರ್. ಅಂಬೇಡ್ಕರ್ ಅವರು ಮನಸ್ಮೃತಿ ಸುಟ್ಟ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ನೇತೃತ್ವದಲ್ಲಿ ರಾಜ್ಯಾದ್ಯಂತ ಮನಸ್ಮೃತಿಯನ್ನು ದಹಿಸಿ ದಸಂಸ ಆಕ್ರೋಶ ವ್ಯಕ್ತಪಡಿಸಿದೆ.
ಜಾತಿ ವ್ಯವಸ್ಥೆ, ಲಿಂಗ ತಾರತಮ್ಯಯನ್ನು ಪ್ರತಿಪಾದಿಸುವ ಅನ್ಯಾಯಕರ ಮತ್ತು ಅಮಾನವೀಯವಾದ ದಂಡಸಂಹಿತೆಯಾದ ಮನುಸ್ಮೃತಿಯನ್ನು 25 ಡಿಸೆಂಬರ್ 1927ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹದ್ ಸಮ್ಮೇಳನದಲ್ಲಿ ಬಹಿರಂಗವಾಗಿ ಸುಟ್ಟು ಹಾಕಿದ್ದರು.
ಬೆಂಗಳೂರು, ಬೀದರ್, ಯಾದಗಿರಿ, ಕೋಲಾರ, ಗುಲ್ಬರ್ಗ, ರಾಯಚೂರು, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮನುಸ್ಮೃತಿಯನ್ನು ದಹನ ಮಾಡಲಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರಾದ ಎನ್.ವೆಂಕಟೇಶ್, ವಿ.ನಾಗರಾಜ್, ಮಾವಳ್ಳಿ ಶಂಕರ್, ಕರಿಯಪ್ಪ ಗುಡಿಮನಿ, ದು.ಸರಸ್ವತಿ, ಶ್ರೀಪಾದ್ ಭಟ್ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.
ತುಮಕೂರಿನ ಅಂಬೇಡ್ಕರ್ ಭವನದಲ್ಲಿ ದಸಂಸ ಮನುಸ್ಮೃತಿಯನ್ನು ಸುಟ್ಟು ದೇಶದ ಅಲಿಖಿತ ಸಂವಿಧಾನವನ್ನು ಬಹಿಷ್ಕರಿಸುವಂತೆ ಕರೆ ನೀಡಿದವು.
ಮೈಸೂರಿನ ಪುರಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ‘ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ- ಮನುಸ್ಮೃತಿಗೆ ಕೊಳ್ಳಿ ಇಡೋಣ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕಲಾಯಿತು.
ಕೋಮು ಕಲಹ ಹಾಗೂ ಕೋಮು ಸಾಮರಸ್ಯ ಎರಡಕ್ಕೂ ಸಾಕ್ಷಿಯಾಗಿರುವ ಉಡುಪಿಯಲ್ಲಿ ದಲಿತ ಮುಖಂಡರು ಮನುಸ್ಮೃತಿ ದಹಿಸಿದರು.
ಕೋಲಾರ ನಗರದ ನಚಿಕೇತ ನಿಲಯದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಎದುರು ಮನುಸ್ಮೃತಿಯನ್ನು ದಹಿಸಲಾಯಿತು.