ಭೋಪಾಲ್: ಪ್ರಧಾನಿ ಮೋದಿಯನ್ನು ಕೊಲ್ಲಲು ತಯಾರಾಗಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಾಜ ಪಟೇರಿಯಾ ಅವರನ್ನು ಮಂಗಳವಾರ ಪನ್ನಾ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಪನ್ನಾ ಜಿಲ್ಲೆಯ ಪವಾಯಿ ಪೊಲೀಸ್ ಠಾಣೆಯಲ್ಲಿ ಪಟೇರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್’ಗಳ ಅಡಿಯಲ್ಲಿ ಸೋಮವಾರ ಮಧ್ಯಾಹ್ನ ಎಫ್’ಐಆರ್ ದಾಖಲಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ದಾಮೋಹ್ ಜಿಲ್ಲೆಯ ಹಟ್ಟಾದಲ್ಲಿರುವ ನಿವಾಸದಿಂದ ಪಟೇರಿಯಾರವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂವಿಧಾನ, ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರನ್ನು ಉಳಿಸಲು ಮೋದಿಯನ್ನು ಕೊಲ್ಲಲು ತಯಾರಾಗಿ ಎಂದು ಭಾನುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಟೇರಿಯಾ ಹೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ರಾಜ್ಯದ ಗೃಹ ಸಚಿವರು ಪಟೇರಿಯಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿದ್ದರು.
ತಮ್ಮ ಹೇಳಿಕೆ ಬಗ್ಗೆ ಬಳಿಕ ಸ್ಪಷ್ಟನೆ ನೀಡಿರುವ ರಾಜ ಪಟೇರಿಯಾ, ‘ನಾನು ಇಲ್ಲಿ ಹತ್ಯೆ ಪದವನ್ನು ಮೋದಿಯವರನ್ನು ಸೋಲಿಸಬೇಕೆಂಬ ಅರ್ಥದಲ್ಲಿ ಹೇಳಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಮಹಾತ್ಮ ಗಾಂಧಿಯ ಅನುಯಾಯಿ. ನಾನು ಯಾರನ್ನೂ ಕೊಲ್ಲುವ ಬಗ್ಗೆ ಮಾತನಾಡುವುದಿಲ್ಲ. ಸಂವಿಧಾನ, ದಲಿತರು, ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಧಾನಿ ಮೋದಿಯವರನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ ಎಂದಷ್ಟೇ ಹೇಳಿರುವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.