ಚಾಮರಾಜನಗರ: ಮಹಾರಾಷ್ಟ್ರ ಸರ್ಕಾರದ ಪುಂಡಾಟಿಕೆಯನ್ನು ವಿರೋಧಿಸಿ ಗುರುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇಗುಲದ ಎದುರು ಕರ್ನಾಟಕ ಸೇನಾಪಡೆ ಅಧ್ಯಕ್ಷ ಶ್ರೀನಿವಾಸಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಮಹಾರಾಷ್ಟ್ರ ಸಿಎಂ ವಿರುದ್ಧ ಧಿಕ್ಕಾರ ಕೂಗಿದ ಬಳಿಕ ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದರು.
ಕೆಲ ಕಾಲ ಹೆದ್ದಾರಿ ಸಂಚಾರ ತಡೆ ನಡೆಸಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭಾವಚಿತ್ರಕ್ಕೆ ಟೊಮೆಟೊ ಎಸೆದು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಸೇನಾಪಡೆ ಸಂಘಟನೆ ಅಧ್ಯಕ್ಷ ಶ್ರೀನಿವಾಸಗೌಡ, ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕನ್ನಡಿಗರ ಮೇಲೆ ಹಾಗೂ ಬೆಳಗಾವಿ ಮೇಲೆ ಇಲ್ಲದ ಸಲ್ಲದ ಆಪಾದನೆ ಮಾಡುತ್ತಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಸಂಸತ್ ಅಧಿವೇಶನದಲ್ಲಿ ಮಹಾರಾಷ್ಟ್ರದ ಎಲ್ಲಾ ಸಂಸದರು ಪಕ್ಷಭೇದ ಮರೆತು ಮಹಾರಾಷ್ಟ್ರದ ಪರ ದನಿ ಎತ್ತಿದ್ದಾರೆ. ಆದರೆ, ನಮ್ಮ ರಾಜ್ಯದ ಸಂಸದರಿಗೆ ಕರ್ನಾಟಕದ ಪರ ಮಾತನಾಡಲು ಧೈರ್ಯವಿಲ್ಲ. ಇವರು ಹೈಕಮಾಂಡ್ ಓಲೈಕೆ ಮಾಡುವ ಸಲುವಾಗಿ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಗೌರವ ಕಾಪಾಡುವುದಕ್ಕಾಗಲಿ ಅಥವಾ ರಾಜ್ಯದ ಹಿತ ಕಾಪಾಡುವುದಕ್ಕಾಗಿ ರಾಜಕಾರಣ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಬುದ್ಧಿವಾದ ಹೇಳಬೇಕು, ಕೇಂದ್ರ ಸರ್ಕಾರ ಕೇವಲ ನಾಟಕವಾಡಿಕೊಂಡು ಕುಳಿತರೆ ಆಗುವುದಿಲ್ಲ. ನಾವು ಕೇಂದ್ರಕ್ಕೆ ರಾಜ್ಯದಿಂದ 25 ಜನ ಸಂಸದರನ್ನು ನೀಡಿದ್ದರೂ ಸಹ ಕೇಂದ್ರ ಸರ್ಕಾರ ಮಹಾರಾಷ್ಟ್ರದ ಚಮಚಾದಂತೆ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.