ಬೆಂಗಳೂರು: ಸುಪ್ರೀಂಕೋರ್ಟ್ ನಲ್ಲಿ ಗಡಿ ವಿವಾದದ ಪ್ರಕರಣ ವಿಚಾರಣೆಗೆ ಬರಲಿದ್ದು, ಕರ್ನಾಟಕದ ನಿಲುವು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿಯ ಅಂಗವಾಗಿ ವಿಧಾನ ಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಹಾರಾಷ್ಟ್ರದ ಅರ್ಜಿ ಮೈಂಟೆನಬಲ್ ಅಲ್ಲ ಎನ್ನುವುದು ನಮ್ಮ ನಿಲುವು. ಅದನ್ನೇ ನಮ್ಮ ವಕೀಲರು ವಾದ ಮಂಡಿಸಿದ್ದಾರೆ. ನಮ್ಮ ನಿಲುವು ಸಂವಿಧಾನಬದ್ಧ ಹಾಗೂ ಕಾನೂನಾತ್ಮಕವಾಗಿದೆ. ಎಲ್ಲಾ ಅಂಶಗಳ ಬಗ್ಗೆ ವಕೀಲರು ವಾದ ಮಾಡಲಿದ್ದಾರೆ ಎಂದರು.
ಪಕ್ಷದಲ್ಲಿ ರೌಡಿಗಳಿಗೆ ಅವಕಾಶವಿಲ್ಲ
ಪಕ್ಷದಲ್ಲಿ ಯಾವುದೇ ರೌಡಿಗಳನ್ನು ನಾವು ಸೇರ್ಪಡೆ ಮಾಡುವುದಿಲ್ಲ. ಯಾವುದೇ ಅವಕಾಶಗಳನ್ನು ಕೊಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದರು.
ವಕ್ಫ್ ಮಂಡಳಿ ಅಧ್ಯಕ್ಷರು ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕವಾಗಿ ಕಾಲೇಜು ತೆರೆಯಲಿದ್ದು ಹಿಜಾಬ್ ಧರಿಸಲು ಅನುಮತಿ ನೀಡುವು ದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ಸರ್ಕಾರದಲ್ಲಿ ಚರ್ಚೆಯಾಗಿಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯವಿರಬಹುದು. ಇದು ನಮ್ಮ ಸರ್ಕಾರದ ನಿಲುವಲ್ಲ. ವಕ್ಫ್ ಮಂಡಳಿ ಅಧ್ಯಕ್ಷರು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ಮಾಡಬೇಕು ಎಂದರು.