ಲಕ್ನೋ: ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರ ಪ್ರದೇಶದ ಮೀರತ್ನ ಇನಾಯತ್ ಪುರ್ ಹಳ್ಳಿಯ ಕಿಥೋರ್ ಕಾಲೇಜಿನಲ್ಲಿ ನಡೆದಿದೆ.
ಶಿಕ್ಷಕಿ ಬಗ್ಗೆ ವಿದ್ಯಾರ್ಥಿಗಳು ಅಶ್ಲೀಲ ಕಾಮೆಂಟ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತಾವು ಶಿಕ್ಷಕಿಗೆ ಕಿರುಕುಳ ನೀಡಿದ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಶಿಕ್ಷಕಿಯನ್ನು 12 ನೇ ತರಗತಿಯ ವಿದ್ಯಾರ್ಥಿಗಳು “ಜಾನ್” ಎಂದು ಕರೆದು ಐ ಲವ್ ಯು ಎಂದು ಹೇಳುತ್ತಿರುವುದು ಕಾಣಬಹುದು.
ಈ ಸಂಬಂಧ ಶಿಕ್ಷಕಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, 12ನೇ ತರಗತಿಯ ವಿದ್ಯಾರ್ಥಿಗಳು ಕಳೆದ ಕೆಲವು ವಾರಗಳಿಂದ ತರಗತಿಯಲ್ಲಿ ಕಿರುಕುಳ ನೀಡುತ್ತಿರುವುದಲ್ಲದೆ ದಾರಿಯಲ್ಲಿಯೂ ಅಸಭ್ಯವಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ಪೋಷಕರಿಗೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು 27 ವರ್ಷದ ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ.
ಜೂನ್ 24ರಂದು ಶಾಲಾ ಆವರಣದಲ್ಲಿ ಶಿಕ್ಷಕಿಗೆ ‘ಐ ಲವ್ ಯೂ’ ಎಂದು ಹೇಳಿದ್ದಲ್ಲದೆ, ಅದರ ವೀಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಶಿಕ್ಷಕಿ ಹಲವು ಬಾರಿ ತಿಳಿಹೇಳಿದ್ದರೂ ಪ್ರಯೋಜನವಾಗಿಲ್ಲ ಎಂದು ಠಾಣಾಧಿಕಾರಿ ಅರವಿಂದ್ ಮೋಹನ್ ಶರ್ಮಾ ಹೇಳಿದ್ದಾರೆ.
ವಶಕ್ಕೆ ಪಡೆದಿರುವ ವಿದ್ಯಾರ್ಥಿಗಳು 16 ವರ್ಷದ ಆಸುಪಾಸಿನಲ್ಲಿದ್ದು, ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.