ಬೆಂಗಳೂರು; ರಾಜ್ಯದ ಗ್ರಂಥಾಲಯ ವಲಯದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದ್ದು, ಡಿಜಿಟಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶಕುಮಾರ ಎಸ್. ಹೊಸಮನಿ ತಿಳಿಸಿದ್ದಾರೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಕೇಂದ್ರ ವಲಯದಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭವನ್ನು ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕೇಂದ್ರ ವಲಯದ ಶಾಖಾ ಗ್ರಂಥಾಲಯ ವಿಭಾಗಗಳ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ 70 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಅವರು, ಡಿಜಿಟಲೀಕರಣದಿಂದ ಹೆಚ್ಚಿನ ಓದುಗರನ್ನು ತಲುಪಲು ಮತ್ತು ಗ್ರಂಥಾಲಯ ನಿರ್ವಹಣೆ ಸುಲಭವಾಗಿದೆ. ಈ ಯಶಸ್ಸಿನ ನಂತರ ಎಲ್ಲಾ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಲು ಒತ್ತು ನೀಡಲಾಗಿದೆ ಎಂದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕರಾದ ಟಿ.ಮಲ್ಲೇಶಪ್ಪ, ಡಾ. ಪಿ.ವೈ, ರಾಜೇಂದ್ರಕುಮಾರ್, ಗ್ರಂಥಾಲಯ ಪ್ರಾಧಿಕಾರದ ಸದಸ್ಯರು, ಸಾಹಿತಿ ಶೂದ್ರ ಶ್ರೀನಿವಾಸ, ಶಿಕ್ಷಣಾಧಿಕಾರಿ ಮುತ್ತಯ್ಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯವಸ್ಥಾಪಕ ನರೇಂದ್ರ ಬಾಬು, ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ದಿವಾಕರ, ಮುಖ್ಯ ಗ್ರಂಥಾಲಯ ಅಧಿಕಾರಿ ಎಂ. ಶಂಕರಪ್ಪ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು.
ಖ್ಯಾತ ಗಾಯಕಿ ಚಾಂದಿನಿ ಗರ್ತಿಕೆರೆ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.