ಭೋಪಾಲ್: ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ದಲ್ಲಿ ದನವೊಂದು ಮುಕ್ತವಾಗಿ ಅಡ್ಡಾಡಿದ ಘಟನೆ ಮಧ್ಯಪ್ರದೇಶದ ಮಧ್ಯಪ್ರದೇಶದ ರಾಜ್‌ಗಡ್ ನಲ್ಲಿ ನಡೆದಿದೆ.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ರಾಜ್‌ಗಡ್ ಜಿಲ್ಲೆಯ ಆಸ್ಪತ್ರೆಯ ಐಸಿಯುನಲ್ಲಿ ದನವೊಂದು ಮುಕ್ತವಾಗಿ ಅಡ್ಡಾಡುತ್ತಿರುವ ವಿಲಕ್ಷಕಾರಿ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದನವು ಆಸ್ಪತ್ರೆಯ ಆವರಣದಲ್ಲಿರುವ ವೈದ್ಯಕೀಯ ತ್ಯಾಜ್ಯವಿರುವ ತೊಟ್ಟಿಗಳಿಂದ ತಿನ್ನುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.
ಆಸ್ಪತ್ರೆಯ ಹಳೆಯ ಕೋವಿಡ್ ವಾರ್ಡ್‌ನೊಳಗೆ ಹಸುವೊಂದು ಮುಕ್ತವಾಗಿ ತಿರುಗಾಡುತ್ತಿದೆ ಎಂಬ ಮಾಹಿತಿ ತಿಳಿದು ಬರುತ್ತಿದ್ದಂತೆಯೇ ಸೆಕ್ಯುರಿಟಿ ಗಾರ್ಡ್ ಮತ್ತು ಇತರ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ರಾಜೇಂದ್ರ ಕಟಾರಿಯಾ ತಿಳಿಸಿದ್ದಾರೆ.
ಆರಂಭದಲ್ಲಿ ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರಭುರಾಮ್ ಚೌಧರಿ ಇಂತಹ ಯಾವುದೇ ಘಟನೆಯ ಬಗ್ಗೆ ನನಗೆ ತಿಳಿದು ಬಂದಿಲ್ಲ ಎಂದು ಹೇಳಿದ್ದರು. ಆದರೆ ವೀಡಿಯೋ ವೈರಲ್ ಆದ ನಂತರ, ಮೂರು ಜನರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.