ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಣ: ಎಫ್’ಐಆರ್ ದಾಖಲು

Prasthutha|

►ಎಲ್ಲಾ ಟ್ಯಾಂಕ್ ಗಳ ನೀರನ್ನು ಕುಡಿದು ಸವಾಲು ಹಾಕಿದ ದಲಿತರು

- Advertisement -

ಮೈಸೂರು: ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ನೀರು ಕುಡಿದರು ಎಂಬ ಕಾರಣಕ್ಕೆ  ನೀರು ಸರಬರಾಜು ಟ್ಯಾಂಕ್’ನ ಸಂಪೂರ್ಣ ನೀರು ಖಾಲಿ ಮಾಡಿ ಗೋಮೂತ್ರದಿಂದ ಶುದ್ಧೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಶುಕ್ರವಾರ ಎಚ್.ಡಿ.ಕೋಟೆ ತಾಲೂಕಿನ ಸರಗೂರಿನಿಂದ ಕೆಲವು ದಲಿತರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ.

- Advertisement -

ಟ್ಯಾಂಕ್ ಶುದ್ಧೀಕರಿಸಿರುವುದನ್ನು ಖಂಡಿಸಿರುವ ದಲಿತ ಯುವಕರು ಚಾಮರಾಜನಗರ ತಹಶೀಲ್ದಾರ್ ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ತೆರಳಿ ಅಲ್ಲಿನ ಎಲ್ಲಾ ಟ್ಯಾಂಕ್’ಗಳಲ್ಲಿನ ನೀರನ್ನು ಕುಡಿದು, ಟ್ಯಾಂಕ್’ಗಳು ಸಾರ್ವಜನಿಕ ಬಳಕೆಗಾಗಿ ಇದ್ದು, ಇದರಿಂದ ಯಾರು ಬೇಕಾದರೂ ನೀರನ್ನು ಕುಡಿಯಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.

ಪ್ರಕರಣ ಸಂಬಂಧ ಗ್ರಾಮದ ಪರಿಶಿಷ್ಟ ಸಮುದಾಯದ ಮುಖಂಡ ಗಿರಿಯಪ್ಪ ದೂರು ನೀಡಿದ್ದು, ಅದೇ ಗ್ರಾಮದ ವೀರಶೈವ ಮುಖಂಡ ಮಹದೇವಪ್ಪ ಎಂಬುವವರ ವಿರುದ್ಧ ಎಫ್’ಐಆರ್ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.

ಈ ನಡುವೆ ಭಾನುವಾರ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಘಟನೆ ಬಗ್ಗೆ ಅಧಿಕಾರಿಗಳ ಮಾಹಿತಿ ಪಡೆದುಕೊಂಡಿದ್ದು, ತನಿಖೆಗೆ ಆದೇಶಿಸಿದ್ದಾರೆ.

ನ.18ರಂದು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಯುವಕನ ಮದುವೆಗೆ ಬಂದಿದ್ದ ಶಿವಮ್ಮ (ಮಹದೇವಮ್ಮ) ಮಧ್ಯಾಹ್ನ ಊಟ ಮುಗಿಸಿ ಹೋಗುವಾಗ ಕೃಷ್ಣರಾಯ ದೇವಸ್ಥಾನದ ಬಳಿಯ ತೊಂಬೆಗೆ (ನೀರಿನ ಟ್ಯಾಂಕ್) ಹೋಗಿ ನೀರು ಕುಡಿದಿದ್ದರು. ಈ ವೇಳೆ ಆ ಪ್ರದೇಶದ ನಿವಾಸಿಯೊಬ್ಬರು ಇತರರನ್ನು ಕರೆದು ಟ್ಯಾಂಕ್’ನಲ್ಲಿನ ನೀರು ಕುಡಿದು ಮಲಿನ ಮಾಡಿದ್ದಾರೆಂದು ಮಹಿಳೆಯನ್ನು ನಿಂದಿಸಿದ್ದರು. ನಂತರ ಮಹಿಳೆ ಗ್ರಾಮವನ್ನು ತೊರೆದಾಗ ಟ್ಯಾಂಕ್’ನಲ್ಲಿನ ನೀರನ್ನು ಖಾಲಿ ಮಾಡಿ ಗೋಮೂತ್ರದಿಂದ ಸ್ವಚ್ಛಗೊಳಿಸಿದ್ದರು.



Join Whatsapp