ಜೈಪುರ: 2011ರಲ್ಲಿ ನಡೆದ ಫೂಲ್ ಮುಹಮ್ಮದ್ ಎಂಬ ಪೊಲೀಸ್ ಅಧಿಕಾರಿಯ ಸಜೀವವಾಗಿ ಬೆಂಕಿ ಹಚ್ಚಿ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ವಿಶೇಷ ನ್ಯಾಯಾಲಯ 30 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಜೀವಾವಧಿ ಶಿಕ್ಷೆಗೊಳಪಟ್ಟವರಲ್ಲಿ ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಸಿಂಗ್ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಿದ ಈ ಪ್ರಕರಣವನ್ನು ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯ 49 ಮಂದಿಯನ್ನು ಖುಲಾಸೆಗೊಳಿಸಿತ್ತು. ಅಲ್ಲದೆ ಈ ಪ್ರಕರಣದಲ್ಲಿ ಅಂದಿನ ಉಪಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 30 ಮಂದಿಯನ್ನು ದೋಷಿ ಎಂದು ಪರಿಗಣಿಸಿದ ನ್ಯಾಯಾಲಯ, ಎಲ್ಲ 30 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗಿದೆ ಎಂದು ಸಿಬಿಐ ಪರ ವಕೀಲ ಶೀದಾಸ್ ಸಿಂಗ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಯ ವೇಳೆ ಠಾಣಾಧಿಕಾರಿ ಫೂಲ್ ಮುಹಮ್ಮದ್ ಅವರು ಗಾಯಗೊಂಡಿದ್ದರು ಮತ್ತು ಅವರ ಅಧಿಕೃತ ವಾಹನದಲ್ಲಿ ವಿಶ್ರಾಂತಿ ಪಡೆದಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪೊಂದು ಅವರ ವಾಹನಕ್ಕೆ ಬೆಂಕಿ ಹಚ್ಚಿ ಆ ವಾಹನದಲ್ಲಿದ್ದ ಫೂಲ್ ಮುಹಮ್ಮದ್ ಅವರನ್ನು ಜೀವಂತವಾಗಿ ಸುಟ್ಟು ಹಾಕಿತ್ತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಸವಾಯಿ ಮಾಧೋಪುರದ ಅಂದಿನ ಉಪಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಸಿಂಗ್ ತನ್ವರ್ ಅಲಿಯಾಸ್ ಮಹೇಂದರ್ ಸಿಂಗ್ ಕಲ್ಬೆಲಿಯಾ, ರಾಧೇಶ್ಯಾಮ್ ಮಾಲಿ, ಪರಮಾನಂದ್ ಮೀನಾ, ಬಲ್ಲೋ ಅಲಿಯಾಸ್ ಬಬ್ಲು ಮಾಲಿ, ಪೃಥ್ವಿರಾಜ್ ಮೀನಾ, ರಾಮಚರಣ್ ಮೀನಾ, ಚಿರಂಜಿಲಾಲ್ ಮಾಲಿ, ಶೇರ್ ಸಿಂಗ್ ಮೀನಾ, ರಮೇಶ್ ಮೀನಾ, ಹರ್ಜಿ ಮಾಲಿ, ಕಾಲು, ಬಜರಂಗ ಖಾತಿಕ್, ಮುರಾರಿ ಮೀನಾ, ಚತುರ್ಭುಜ್ ಮೀನಾ, ಬನ್ವಾರಿ ಮೀನಾ, ರಾಮಕರಣ್ ಮೀನಾ, ಹಂಸರಾಜ್ ಮಾಲಿ, ಶಂಕರ್ ಲಾಲ್ ಮಾಲಿ, ಬನ್ವಾರಿ ಮೀನಾ, ಧರ್ಮೇಂದ್ರ ಮೀನಾ, ಗುಮಾನ್ ಮೀನಾ, ಯೋಗೇಂದ್ರ ನಾಥ್, ಬ್ರಿಜೇಶ್ ಮಾಲಿ, ಹನುಮಾನ್ ಅಲಿಯಾಸ್ ದಾಗಾ, ರಾಮ್‌ಜಿಲಾಲ್, ಮಖನ್ ಮೀನಾ, ರಾಮ್‌ಭರೋಸಿ ಮೀನಾ, ಮೋಹನ್, ಮುಖೇಶ್ ಮಾಲಿ ಅಲಿಯಾಸ್ ಮುಖೇಶ್ ಟೇಲರ್ ಮತ್ತು ಶ್ಯಾಮಲಾಲ್ ಮಾಲಿ ಎಂಬವರು ಜೀವಾವಧಿ ಶಿಕ್ಷೆಗೊಳಪಟ್ಟವರು ಎಂದು ತಿಳಿದುಬಂದಿದೆ.