ನವದೆಹಲಿ: ತನ್ನ ಕರ್ತವ್ಯದ ಕುರಿತು ಇನ್’ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡದ್ದಕ್ಕಾಗಿ ಗುಜರಾತ್ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ನಿಯುಕ್ತರಾಗಿದ್ದ ಐಎಎಸ್ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿದೆ.
ಅಧಿಕಾರಿ ಅಭಿಷೇಕ್ ಸಿಂಗ್ ಅವರನ್ನು ನವೆಂಬರ್ 7 ರಂದು ಅಹ್ಮದಾಬಾದ್ ಜಿಲ್ಲೆಯ ಬಾಪುನಗರ ಮತ್ತು ಅಸರ್ವ ಕ್ಷೇತ್ರಗಳ ‘ಸಾಮಾನ್ಯ ವೀಕ್ಷಕ’ರಾಗಿ ಡಿಸೆಂಬರ್’ನಲ್ಲಿ ನಡೆಯಲಿರುವ ಗುಜರಾತ್ ಚುನಾವಣೆಗೆ ನೇಮಿಸಲಾಗಿತ್ತು.
ಈ ಕುರಿತು ಅಭಿಷೇಕ್ ಸಿಂಗ್ ಜನರಲ್ ಅಬ್ಸರ್ವರ್ ಆಗಿ (ಸಾಮಾನ್ಯ ವೀಕ್ಷಕ) ಕೆಲಸ ಮಾಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ತಮ್ಮ ಅಧಿಕೃತ ಸ್ಥಾನವನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗವು ಅವರನ್ನು ಕರ್ತವ್ಯದಿಂದ ತೆರವು ಮಾಡಿದೆ.
ಚುನಾವಣಾ ಆಯೋಗವು ಅಧಿಕಾರಿಯ ಇನ್’ಸ್ಟಾಗ್ರಾಮ್ ಪೋಸ್ಟ್’ಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಅವರನ್ನು ಸಾಮಾನ್ಯ ವೀಕ್ಷಕ ಹುದ್ದೆಯಿಂದ ತಕ್ಷಣವೇ ತೆರೆವು ಮಾಡಲಾಗಿದೆ. ಮುಂದಿನ ಆದೇಶದವರೆಗೆ ಚುನಾವಣಾ ಸಂಬಂಧಿತ ಕರ್ತವ್ಯದಿಂದ ಅವರನ್ನು ಹೊರಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಭಿಷೇಕ್, ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡಿರುವುದಾಗಿಯೂ ಹೇಳಿದ್ದಾರೆ.