ಬೆಂಗಳೂರು: 545 ಪಿಎಸ್’ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಪ್ರಕರಣದ ಮೊದಲ ಆರೋಪಿಗೆ ಹಾಗೂ ಪರೀಕ್ಷೆಯಲ್ಲಿ ಮೊದಲ Rank ಪಡೆದ ಅಭ್ಯರ್ಥಿಗೆ ನ್ಯಾಯಾಲಯವು ಜಾಮೀನು ನೀಡಿದೆ.
ಪಿಎಸ್’ಐ ಹಗರಣದ ಆರೋಪಿ ಜಾಗೃತ್ ಹಾಗೂ ಮಹಿಳಾ ಕೋಟಾದಲ್ಲಿ ಪ್ರಥಮ ರಾಂಕ್ ಪಡೆದಿದ್ದ ರಚನಾಗೆ ಜಾಮೀನು ದೊರೆತಿದೆ.
ಆರೋಪಿಗಳ ಪರ ವಕೀಲ ಶ್ಯಾಮ್’ಸುಂದರ್ ವಾದ ಮಾಡಿದರು. 545 ಪಿಎಸ್’ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 17ನೇ ಆರೋಪಿ ರಚನಾಳನ್ನು ಸಿಐಡಿ ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿತ್ತು. ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ರಚನಾ ಹನುಮಂತ್ ಮೊದಲ ರಾಂಕ್ ಪಡೆದಿದ್ದಳು.
ಅಕ್ರಮ ಪ್ರಕರಣ ಬಯಲಾಗುತ್ತಿದ್ದಂತೆ ರಚನಾ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಸಿಐಡಿ ತನಿಖೆಯಲ್ಲಿ ರಚನಾ 30 ಲಕ್ಷ ನೀಡಿದ್ದರೆಂಬ ಮಾಹಿತಿ ಬಹಿರಂಗವಾಗಿತ್ತು. ಈ ಸಂಬಂಧ 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್’ಪಿ ನರಸಿಂಹಮೂರ್ತಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನನ್ವಯ ಪ್ರಕರಣ ದಾಖಲಿಸಲಾಗಿತ್ತು. ರಚನಾ ಸರ್ಕಾರದ ಮರುಪರಿಕ್ಷಾ ಆದೇಶದ ವಿರುದ್ಧವೂ ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದು ತನ್ನ ವಿರುದ್ಧ ಎಫ್’ಐಆರ್ ದಾಖಲಾದ ಬಳಿಕ ರಚನಾ ನಾಪತ್ತೆಯಾಗಿದ್ದಳು.
ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಸ್.ಜಾಗೃತ್’ನನ್ನು ಸಿಐಡಿ ಡಿವೈಎಸ್’ಪಿ ಬಿ.ಕೆ.ಶೇಖರ್ ನೇತೃತ್ವದ ತಂಡ ಚನ್ನಪಟ್ಟಣದಲ್ಲಿ ಬಂಧಿಸಿತ್ತು. ಎಸ್.ಜಾಗೃತ್ ಪಿಎಸ್ಐ ಪರೀಕ್ಷೆಯಲ್ಲಿ 4ನೇ ರಾಂಕ್ ಪಡೆದಿದ್ದ.
ಎಸ್.ಜಾಗೃತ್ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್’ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಫ್’ಐಆರ್ ಹಾಕಿರುವುದನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ನಾಲ್ವರು ಅಭ್ಯರ್ಥಿಗಳಲ್ಲಿ ಜಾಗೃತನೂ ಒಬ್ಬನಾಗಿದ್ದ.