ಚಿಕ್ಕಮಗಳೂರು: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಗಾಯತ್ರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮನೆ ಮೇಲೆ, ಚಿಕ್ಕಮಗಳೂರು ತಾಲೂಕಿನ ಮರ್ಲೆಯಲ್ಲಿರುವ ಕಲ್ಲಿನ ಕ್ರಷರ್ ಕಚೇರಿ ಹಾಗೂ ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಅಳಿಯ ಸಂತೋಷ್ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಸರಕಾರ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಶಾಸಕ ಸಿ.ಟಿ. ರವಿ ವಿರುದ್ಧ ‘ಲೂಟಿ ರವಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.