ಅಜಂಗಢ: ಶೃದ್ಧಾ ವಾಲ್ಕರ್ ಎಂಬ ಮುಂಬೈ ಮೂಲದ ಯುವತಿಯ ಭೀಕರ ಕೊಲೆ ಪ್ರಕರಣ ಹಸಿ ಇರುವಾಗಲೇ ಇಂತಹದ್ದೇ ಮತ್ತೊಂದು ಭಯಾನಕ ಘಟನೆ ಉತ್ತರ ಪ್ರದೇಶದ ಅಜಂಗಢದಲ್ಲಿ ಬೆಳಕಿಗೆ ಬಂದಿದೆ.
ಮಂಗಳವಾರ ಪಶ್ಚಿಮ್ಪಟ್ಟಿ ಗ್ರಾಮದ ಬಾವಿಯಲ್ಲಿ ಹಲವು ತುಂಡುಗಳಾಗಿ ಕತ್ತರಿಸಿದ ಅಪರಿಚಿತ ಯುವತಿಯ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪಶ್ಚಿಮ್ಪಟ್ಟಿ ಗ್ರಾಮದ ಬಾವಿಯಲ್ಲಿ ತಲೆ ಇಲ್ಲದ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದಲ್ಲಿ ಕೇವಲ ಒಳಉಡುಪು ಇದೆ. ಕಾಲುಗಳು ಮತ್ತು ಕೈಗಳು ಬಾವಿಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಮೃತದೇಹವನ್ನು ಬಾವಿಯಿಂದ ಹೊರತೆಗೆದು ಪರೀಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ, ಮಹಿಳೆಯ ಗುರುತು ಪತ್ತೆಯಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.