ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಜನ ಸಂಕಲ್ಪ ಯಾತ್ರೆಯಲ್ಲಿ ಖಾಲಿ ಕುರ್ಚಿಗಳೇ ಎದ್ದು ಕಾಣುತ್ತಿದ್ದು, ಬಿಜೆಪಿಯ ಅಸಮರ್ಪಕ ಆಡಳಿತ ವ್ಯವಸ್ಥೆಗೆ ಸ್ವತಃ ಬೆಂಬಲಿಗರೇ ಬೇಸತ್ತು ಹೋಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಜನತೆ ಸುಳ್ಳುಗಳನ್ನು ಎಷ್ಟು ದಿನ ಸಹಿಸಬಲ್ಲರು? ಟೊಳ್ಳುಗಳನ್ನು ಎಷ್ಟು ದಿನ ನಂಬಬಲ್ಲರು, ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ನೀಡಿದ ರಾಜ್ಯ ಬಿಜೆಪಿ ಸರ್ಕಾರ ಪ್ರಧಾನಿಯನ್ನು ಕರೆಸಿ ಚುನಾವಣಾ ತಯಾರಿ ಮಾಡಿದರೂ ಕುರ್ಚಿಗಳು ಖಾಲಿಯಾಗುತ್ತಿವೆ. ಟ್ರಬಲ್ ಇಂಜಿನ್ ಸರ್ಕಾರದ ಮೇಲೆ ಜನಸಮಾನ್ಯರಷ್ಟೇ ಅಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸತ್ತಿದ್ದಾರೆ ಎಂದು ಲೇವಡಿ ಮಾಡಿದೆ.
ಹಣ ನೀಡಿ ಜನರನ್ನೂ ಕರೆತಂದರು. ಕುರ್ಚಿಗಳನ್ನೂ ತಂದರು. ಆದರೆ ಉಳಿದಿದ್ದು ಕುರ್ಚಿಗಳು ಮಾತ್ರ. ಜೀವವಿದ್ದಿದ್ದರೆ ಕುರ್ಚಿಗಳಿಗೂ ಜಿಗುಪ್ಸೆ ಹುಟ್ಟಿ ಎದ್ದು ಹೊರಡುತ್ತಿದ್ದವು. ಬಿಜೆಪಿ ಗೆ ಖಾಲಿ ಕುರ್ಚಿಗಳೇ ಪ್ರೇಕ್ಷಕರು, ಕುರ್ಚಿಗಳು ಎದ್ದುಹೋಗುವುದಿಲ್ಲ ಎಂಬ ಖಾತರಿ ಇದೆ ಎಂದು ಗೇಲಿ ಮಾಡಿದೆ.