ನವದೆಹಲಿ: ದೆಹಲಿಯಲ್ಲಿ ಮುಂದಿನ ವಾರ ನಡೆಯುವ ಎನ್ಎಂಪಿಟಿ- ಭಯೋತ್ಪಾದಕ ಕಾರ್ಯಕ್ಕೆ ಹಣಕಾಸು ನೆರವು ತಡೆ ಕುರಿತ ಸಮಾವೇಶಕ್ಕೆ ಫಿಫಾ ವಿಶ್ವ ಕಪ್ ಫುಟ್ಬಾಲ್, 2022ರ ಚುನಾವಣೆ ಮತ್ತಿತರ ಕಾರಣಗಳಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ 14 ದೇಶಗಳು ಸಮಾವೇಶದಿಂದ ದೂರ ಉಳಿದಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಗೃಹ ಸಚಿವಾಲಯದ ನೇತೃತ್ವದಲ್ಲಿ ನವೆಂಬರ್ 18-19ರಂದು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.
“ಮೊದಲ ಎನ್’ಎಂಪಿಟಿ ಸಮಾವೇಶವು 2018ರಲ್ಲಿ ಪ್ಯಾರಿಸ್ ನಲ್ಲಿ, ಎರಡನೆಯದು 2019ರಲ್ಲಿ ಮೆಲ್ಬೋರ್ನ್ ನಲ್ಲಿ ನಡೆದಿತ್ತು. 2020ರ ಸಮಾವೇಶ ದಿಲ್ಲಿಯಲ್ಲಿ ನಿಶ್ಚಯವಾಗಿತ್ತು. ಕೋವಿಡ್ ಕಾರಣಕ್ಕೆ ಅದನ್ನು ಮುಂದೂಡಲಾಗಿತ್ತು.” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾರತವು 87 ದೇಶ ಮತ್ತು 26 ಬಹುಪಕ್ಷೀಯ ಸಂಸ್ಥೆಗಳಿಗೆ ಆಹ್ವಾನ ನೀಡಿದ್ದು, ಕೆಲವು ದೇಶಗಳು ತಮ್ಮ ಒಪ್ಪಿಗೆ ಕಳುಹಿಸಿವೆ, ಕೆಲವು ದೇಶಗಳು ಸಮಾವೇಶಕ್ಕೆ ಬರಲಾಗುವುದಿಲ್ಲ ಎಂದು ತಿಳಿಸಿವೆ.
“ಇಲ್ಲಿಯವರಗೆ 50 ದೇಶಗಳು ಪಾಲ್ಗೊಳ್ಳುವುದಾಗಿ ತಿಳಿಸಿವೆ. ಕೆಲವರು ಸಚಿವರ ನಿಯೋಗ ಕಳುಹಿಸುವುದಾಗಿಯೂ ಬರೆದಿದ್ದಾರೆ. 14 ದೇಶಗಳು ನಾನಾ ಕಾರಣ ನೀಡಿ ಸಮಾವೇಶಕ್ಕೆ ಬರಲಾಗುವುದಿಲ್ಲ ಎಂದು ತಿಳಿಸಿವೆ.
ಫಿಫಾ ವಿಶ್ವ ಕಪ್ ನವೆಂಬರ್ 20ರಿಂದ ಆರಂಭವಾಗುವುದರಿಂದ ಸಮಾವೇಶದಲ್ಲಿ ಭಾಗವಹಿಸಲು ಆಗದು ಎಂದು ಕತಾರ್ ಹೇಳಿದೆ. ಮಲೇಷ್ಯಾದಲ್ಲಿ ಸಂಸತ್ತು ವಿಸರ್ಜನೆಯಾಗಿದ್ದು ಚುನಾವಣೆ ನಡೆಯುವುದರಿಂದ ಬರಲಾಗದು ಎಂದು ಆ ದೇಶ ಹೇಳಿದೆ.
ಉಗ್ರ ಕೃತ್ಯದ ಜಾಗತಿಕ ಪ್ರವೃತ್ತಿ, ಉಗ್ರ ಕೃತ್ಯಕ್ಕೆ ಹಣ ಹರಿವು, ಹಣ ಹರಿವಿನ ಬಗ್ಗೆ ಮಾಹಿತಿಗಳ ಬಗ್ಗೆ ಮತ್ತು ಅರಿವು, ಹಣ ಹರಿವಿನಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಮತ್ತು ಸರಕಾರೀ ಶಾಮೀಲು, ಭಯೋತ್ಪಾದಕರಿಗೆ ಹಣ ಹರಿವು ತಡೆಯಲು ಇರುವ ಸವಾಲು ಇತ್ಯಾದಿ ವಿಷಯಗಳು ಈ ಸಮಾವೇಶದಲ್ಲಿ ಚರ್ಚೆಯಾಗಲಿವೆ.
ಅಂತರ್ಜಾಲ ಬಳಸಿ ಭಯೋತ್ಪಾದನಾ ಸಂಘಟನೆಗಳು ಈಗೀಗ ಕ್ರಿಪ್ಟೋಕರೆನ್ಸಿ ಚಲಾವಣೆ ನಡೆಸಿರುವುದು ಸಹ ಇತ್ತೀಚಿನ ಯುಎನ್ ಭದ್ರತಾ ಕೌನ್ಸಿಲ್ ನ ಉಗ್ರ ಕೃತ್ಯ ತಡೆಯುವ ಸವಾಲು ಸಭೆಯಲ್ಲಿ ಬೆಳಕಿಗೆ ಬಂದಿತ್ತು.