ಕಲಬುರಗಿ: ಕಾಂಗ್ರೆಸ್ ನವರು ಮನಸ್ಸು ಮಾಡಿದರೆ ಬಿಜೆಪಿಯವರು ಜಿಲ್ಲೆಯಲ್ಲಿ ಓಡಾಡದಂತೆ ಮಾಡಬಹುದು ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾದ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ, ಚಿತ್ತಾಪುರದಲ್ಲಿ ಬಹಿರಂಗವಾಗಿ ಓಡಾಡುತ್ತಿರುವ ನನಗೆ ನೀವು ಎಕೆ–47ನಿಂದ ಶೂಟ್ ಮಾಡಿದರೂ ನಾನು ಸಾಯಲು ಸಿದ್ಧ. ತಮಗೂ ಶೂಟ್ ಮಾಡಲು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದಲ್ಲಿ ಬಹಿರಂಗವಾಗಿ ಓಡಾಡುತ್ತಿರುವ ನಾನು ಶಾಸಕರ ಎಲ್ಲಾ ಸವಾಲುಗಳನ್ನು ಒಪ್ಪಿ ಮುಖಾಮುಖಿ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.
ಚಿತ್ತಾಪುರ ಕ್ಷೇತ್ರದ ನಾನು ಬಡವರ ಪರ ಕೆಲಸ ಮಾಡುತ್ತಿದ್ದೇನೆ. ನೀವು ಎಕೆ–47ನಿಂದ ಶೂಟ್ ಮಾಡಿದರೂ ನಾನು ಸಾಯಲು ಸಿದ್ಧ. ತಮಗೂ ಶೂಟ್ ಮಾಡಲು ಸಿದ್ಧ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಪ್ರಿಯಾಂಕ್ ಖರ್ಗೆ ಅವರು ಆನೆ ಬಲ ಬಂದಂತೆ ಆಡುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸುತ್ತೇವೆ. ರಾಜಕೀಯ ಒತ್ತಡ ತಂದು, ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ನನ್ನ ವಿರುದ್ಧ ಗಡಿಪಾರು ಆದೇಶ ಹೊರಡುವಂತೆ ಮಾಡಿದರು. ಆದರೆ, ನನಗೆ ಗಡಿಪಾರು ಆದೇಶ ಬಂದಾಗ ನೀವೇ (ಪ್ರಿಯಾಂಕ್ ಖರ್ಗೆ) ಗಡಿಪಾರು ಆಗಿದ್ದೀರಾ ಎಂದು ವ್ಯಂಗ್ಯವಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಮನ ಬಂದಂತೆ ಮಾತನಾಡುವ ಮುನ್ನ ಮಣಿಕಂಠ ರಾಠೋಡ ಅವರು ಕಾನೂನು ಅರಿಯಬೇಕು. ಕೀಳುಮಟ್ಟದ ರಾಜಕಾರಣಕ್ಕೆ ಆಸ್ಪದ ನೀಡಬಾರದು. ಚಿತ್ತಾಪುರದಲ್ಲಿ ಯಾವತ್ತೂ ಕೀಳುಮಟ್ಟದ ರಾಜಕಾರಣ ನಡೆದಿರಲಿಲ್ಲ. ಸುಳ್ಳು ಪ್ರಕರಣ ದಾಖಲಿಸುವ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವಂತಹ ಸ್ಥಿತಿ ಇರಲಿಲ್ಲ. ಆದರೆ, ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಇದೆಲ್ಲವೂ ನಡೆಯುತ್ತಿದೆ ಎಂಬರ್ಥದಲ್ಲಿ ಮಾತನಾಡಿದ್ದೆ ಎಂದು ತಿಳಿಸಿದ್ದಾರೆ.
ಮಣಿಕಂಠ ಅವರನ್ನು ಗಡಿಪಾರು ಮಾಡಿರುವುದು ರಾಜ್ಯ ಬಿಜೆಪಿ ಸರ್ಕಾರ, ಅದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.