ಮಂಗಳೂರು: ಐತಿಹಾಸಿಕ ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸಿವಿಲ್ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್’ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಕಾಯ್ದೆಯ ಅನ್ವಯ, ಇದಕ್ಕೆ ಸಂಬಂಧಿಸಿದ ವಿಚಾರ, ವಿವಾದ, ಸಮಸ್ಯೆ ಮತ್ತು ಇನ್ನಿತರ ವಿಷಯದಲ್ಲಿ ಸಿವಿಲ್, ಕಂದಾಯ ಕೋರ್ಟ್, ಇತರ ಪ್ರಾಧಿಕಾರದಲ್ಲಿ ಕೇಸ್ ದಾಖಲಿಸಿ, ವಿಚಾರಣೆ ನಡೆಸುವಂತಿಲ್ಲ. ಆದರೆ ಮಳಲಿ ಮಸೀದಿ ವಿಚಾರದಲ್ಲಿ ಸ್ಥಳೀಯರು ಮಂಗಳೂರಿನ ಸಿವಿಲ್ ನ್ಯಾಯಾಲಯಕ್ಕೆ ಹೋದಾಗ ಮಸೀದಿಯ ಪರ ವಕೀಲರು ಇದನ್ನು ಪ್ರಶ್ನಿಸಿ ಮಧ್ಯಂತರ ಧಾವೆ ಹೂಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು,ವಕ್ಫ್ ಆಸ್ತಿಗೆ ಸಂಬಂಧಪಟ್ಟಂತೆ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬಹುದು ಎಂದು ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ಇದರ ವಿರುದ್ಧ ಕಾನೂನು ತಜ್ಞರ ಸಲಹೆಯನ್ನು ಪಡೆದುಕೊಂಡು, ರಾಜ್ಯ ವಕ್ಫ್ ಬೋರ್ಡ್ ಜೊತೆಗಿನ ಸಮಾಲೋಚನೆಯ ಬಳಿಕ ಇಂದಿನ ತೀರ್ಪಿನ ವಿರುದ್ಧ ಹೈಕೋರ್ಟ್’ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
500 ವರ್ಷದ ಇತಿಹಾಸವಿರುವ ಮಳಲಿ ಮಸೀದಿಯು 2003ರಲ್ಲಿ ವಕ್ಫ್ ಬೋರ್ಡ್’ನಲ್ಲಿ ನೋಂದಾವಣಿಯಾಗಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ತೀರ್ಪಿನ ವಿರುದ್ದ ಕಾನೂನು ಹೋರಾಟ ನಡೆಸಲಿದ್ದೇವೆ. ನಮಗೆ ನ್ಯಾಯ ಸಿಗುವ ನಂಬಿಕೆಯಿದೆ ಎಂದು ಬಿ.ಎ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಮೌಝಮ್ ಪಾಷಾ, ಮಳಲಿ ಮಸೀದಿಯ ಅಧ್ಯಕ್ಷ ಮುಹಮ್ಮದ್, ಉಪಾಧ್ಯಕ್ಷ ಎಂಎ ಅಬೂಬಕ್ಕರ್, ಮಳಲಿ ಮಸೀದಿ ಕೋಶಾಧಿಕಾರಿ ಹಾಜಿ ಮೊಯ್ದಿನ್, ಮಾಜಿ ಮೇಯರ್ ಕೆ.ಅಶ್ರಫ್, ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಅಶ್ರಫ್ ಕಿನಾರ, ಸೈದುದ್ದೀನ್ ಬಜ್ಪೆ, ಹನೀಫ್ ಮಲ್ಲೂರು, ಮುಸ್ತಫಾ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.