Home ಟಾಪ್ ಸುದ್ದಿಗಳು ವೀರ್ಯ ದಾನ ಮುಂದುವರಿಸಿದರೆ 90 ಲಕ್ಷ ದಂಡ| 600 ಮಕ್ಕಳ ತಂದೆಗೆ ಡಚ್ ನ್ಯಾಯಾಲಯ ಎಚ್ಚರಿಕೆ!

ವೀರ್ಯ ದಾನ ಮುಂದುವರಿಸಿದರೆ 90 ಲಕ್ಷ ದಂಡ| 600 ಮಕ್ಕಳ ತಂದೆಗೆ ಡಚ್ ನ್ಯಾಯಾಲಯ ಎಚ್ಚರಿಕೆ!

ಆಮ್‌ಸ್ಟರ್‌ಡ್ಯಾಮ್: ವೀರ್ಯಾಣು ದಾನ ಮಾಡಿ ಸುಮಾರು 600 ಮಕ್ಕಳ ತಂದೆಯಾಗಿರುವ ನೆದರ್ಲ್ಯಾಂಡ್ ಮೂಲದ ಜೊನಾಥನ್ ಮೈಜರ್‌ನನ್ನು ಡಚ್ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದ್ದು, ಇನ್ನು ಮುಂದೆ ವೀರ್ಯಾಣು ದಾನ ಮಾಡುವಂತಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದೆ.

41 ವರ್ಷದ ಜೊನಾಥನ್ ವೀರ್ಯ ದಾನದ ಮೂಲಕ ಹಲವಾರು ಮಕ್ಕಳ ತಂದೆಯಾಗಿದ್ದಾರೆ. ಹೀಗೆಯೇ ದಾನ ಮಾಡುವುದನ್ನು ಮುಂದುವರಿಸಿದರೆ ಭಾರೀ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಜೊನಾಥನ್ ಮೈಜರ್‌ ಕ್ಲಿನಿಕ್‌ಗಳಿಗೆ ವೀರ್ಯಾಣು ದಾನ ಮಾಡುತ್ತಿದ್ದರು. ಇದನ್ನು ಮುಂದುವರಿಸಿದರೆ ಭಾರಿ ದಂಡ ವಿಧಿಸಲಾಗುವುದು. ಪ್ರತಿ ವೀರ್ಯಕ್ಕೆ 1 ಲಕ್ಷ ಯುರೋಗಳಷ್ಟು (ಸರಿಸುಮಾರು ರೂ. 90 ಲಕ್ಷ) ದಂಡವನ್ನು ಪಾವತಿಸಬೇಕಾಗುತ್ತದೆ.

ಮೈಜರ್‌ನ ವೀರ್ಯದ ಮೂಲಕ ಜನಿಸಿದ ಮಕ್ಕಳು ಮತ್ತು ವೀರ್ಯವನ್ನು ಪಡೆದ ಪೋಷಕರ ಪರವಾಗಿ ಸಂಘಟನೆಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಮೈಜರ್ ವೀರ್ಯ ದಾನವನ್ನು ಹೀಗೆ ಮುಂದುವರಿಸಿದರೆ ಮಕ್ಕಳ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಮೈಜರ್‌‌ನ ವೀರ್ಯಾಣುವಿನಲ್ಲಿ ಜನಿಸಿದ ಮಕ್ಕಳೆಲ್ಲರೂ ರಕ್ತ ಸಂಬಂಧಿಗಳಾಗಿದ್ದು, ಅವರು ತಿಳಿಯದೆ ಲೈಂಗಿಕ ಸಂಬಂಧ ಹೊಂದುವ ಸಾಧ್ಯತೆ ಇದೆ. ಇದು ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಯಾವುದೇ ಕ್ಲಿನಿಕ್‌ಗಳಲ್ಲಿ ಮೈಜರ್‌ನ ವೀರ್ಯಾಣು ಸಂಗ್ರಹವಿದ್ದರೆ ಅದನ್ನು ನಾಶಪಡಿಸಲು ಅರ್ಜಿಯ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ಆದೇಶಿಸಿದೆ.

Join Whatsapp
Exit mobile version