ನವದೆಹಲಿ: ವಿಚಾರಣಾಧೀನ ಕೈದಿಗಳು ಸೇರಿದಂತೆ ವಿದೇಶಿ ಜೈಲುಗಳಲ್ಲಿ ಸುಮಾರು 8278 ಭಾರತೀಯ ಕೈದಿಗಳು ಬಂಧಿಯಾಗಿದ್ದು, ಆ ಪೈಕಿ 156 ಮಂದಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಲೋಕಸಭೆಯಲ್ಲಿ ತಿಳಿಸಿದೆ.
ಸುದೀರ್ಘ ಕಾಲದಿಂದ ವಿದೇಶಿ ಜೈಲುಗಳಲ್ಲಿ ಕೊಳೆಯುತ್ತಿರುವ ಭಾರತೀಯ ಕೈದಿಗಳ ವಿವರಗಳನ್ನು ಕೋರಿ ಇ.ಟಿ. ಮುಹಮ್ಮದ್ ಬಶೀರ್ ಮತ್ತು ಡಾ. ಅಲೋಕ್ ಕುಮಾರ್ ಸುಮನ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಸದನದಲ್ಲಿ ಈ ಮೇಲಿನಂತೆ ಪ್ರತಿಕ್ರಿಯಿಸಿದೆ.
81 ರಾಷ್ಟ್ರಗಳ ಮಾಹಿತಿ ಕಲೆಹಾಕಿದ ವಿದೇಶಾಂಗ ಸಚಿವಾಲಯ, ಯುನೈಟೆಡ್ ಅರಬ್ಸ್ ಎಮಿರೇಟ್ಸ್ (1,480), ಸೌದಿ ಅರೇಬಿಯಾ (1,392), ನೇಪಾಳ (1,112), ಪಾಕಿಸ್ತಾನ (701) ಮತ್ತು ಕತಾರ್ (473) ಅಗ್ರ 5 ರಾಷ್ಟ್ರಗಳಲ್ಲಿ ಅತೀ ಹೆಚ್ಚು ಭಾರತೀಯರು ಕೈದಿಗಳಾಗಿದ್ದಾರೆ ಎಂದು ತಿಳಿಸಿದೆ.
ಅದೇ ರೀತಿ ಅತಿ ಹೆಚ್ಚು ಭಾರತೀಯರು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವಿಶ್ವದ 5 ಅಗ್ರ ರಾಷ್ಟ್ರಗಳೆಂದರೆ ಮಲೇಷ್ಯಾ (47), ಕುವೈತ್ (28), ಬಹ್ರೈನ್ (13), ಚೀನಾ (13) ಮತ್ತು ಒಮಾನ್ (12) ಎಂಬುದು ಅಂಕಿಅಂಶಗಳ ಸಹಿತ ಬಹಿರಂಗವಾಗಿದೆ.
ಈ ಮಧ್ಯೆ ಕೈದಿಗಳ ವಾಪಸಾಗಿ ಕಾಯ್ದೆ 2003ರ ಅನ್ವಯ ಇಬ್ಬರು ಭಾರತೀಯ ಪ್ರಜೆಗಳನ್ನು ಶ್ರೀಲಂಕಾದಿಂದ ಭಾರತಕ್ಕೆ ಮತ್ತು ಒಬ್ಬ ಜರ್ಮನ್ ಪ್ರಜೆಯನ್ನು ಭಾರತದಿಂದ ಜರ್ಮನಿಗೆ ವರ್ಗಾಯಿಸಲಾಗಿದೆ.
ಮಾತ್ರವಲ್ಲ ಜನವರಿ 2020 ರಿಂದ ಫೆಬ್ರವರಿ 2022 ರವರೆಗೆ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಅವರ ಉಳಿದ ಶಿಕ್ಷೆಯನ್ನು ಅನುಭವಿಸಲು ಭಾರತದಿಂದ ಬಾಂಗ್ಲಾದೇಶಕ್ಕೆ ವರ್ಗಾಯಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.