Home ಕ್ರೀಡೆ ಟಿ-20 ಕ್ರಿಕೆಟ್: 8 ರನ್‌ಗಳಿಗೆ ನೇಪಾಳ ಆಲೌಟ್, ಇತರೆ ರೂಪದಲ್ಲಿ 3 ರನ್ ನೀಡಿದ್ದ ಯುಎಇ

ಟಿ-20 ಕ್ರಿಕೆಟ್: 8 ರನ್‌ಗಳಿಗೆ ನೇಪಾಳ ಆಲೌಟ್, ಇತರೆ ರೂಪದಲ್ಲಿ 3 ರನ್ ನೀಡಿದ್ದ ಯುಎಇ

ಕ್ರಿಕೆಟ್ ಅಭಿಮಾನಿಗಳು ಅಚ್ಚರಿಪಡುವಂತಹ ಅಪರೂಪದ ಕೆಟ್ಟ ದಾಖಲೆಯೊಂದಕ್ಕೆ ಅಂಡರ್-19 ಮಹಿಳಾ ಟಿ-20 ವಿಶ್ವಕಪ್ ಕ್ವಾಲಿಫೈಯರ್ ವೇದಿಕೆಯಾಗಿದೆ. ಯುಎಇ ಮತ್ತು ನೇಪಾಳ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೇಪಾಳದ ವನಿತೆಯರು ಕೇವಲ 8 ರನ್‌ಗಳಿಸುವಷ್ಟರಲ್ಲಿಯೇ ಆಲೌಟ್ ಆಗಿದ್ದಾರೆ. ಈ ಮೊತ್ತವನ್ನು ಯುನೈಟೆಡ್ ಅರಬ್ ಎಮಿರೆಟ್ಸ್ ತಂಡವು ಕೇವಲ 7 ಎಸೆತಗಳಲ್ಲಿ ಚೇಸ್ ಮಾಡಿದೆ. 

ಆ ಮೂಲಕ, ಕ್ರಿಕೆಟ್ ಇತಿಹಾಸದಲ್ಲಿಯೇ ತಂಡವೊಂದು ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ʻಹೀನಾಯ ದಾಖಲೆʼ ನೇಪಾಳದ ಅಂಡರ್-19 ಮಹಿಳಾ ಟಿ-20 ತಂಡದ ಪಾಲಾಗಿದೆ. 8 ರನ್ ಗಳಿಸಲು ನೇಪಾಳ ತಂಡ 8.1 ಓವರ್‌ಗಳನ್ನು ಆಡಿರುವುದು ಮತ್ತೊಂದು ವಿಶೇಷ.  

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನೇಪಾಳ, ಯುಎಇಯ ಎಡಗೈ ಬೌಲರ್ ಮಹಿಕಾ ಗೌರ್ ಮತ್ತು ಇಂಧುಜಾ ನಂದಕುಮಾರ್ ಅವರ ಮಾರಕ ದಾಳಿಯಿಂದಾಗಿ ಪೆವಿಲಿಯನ್ ಪರೇಡ್ ನಡೆಸಿತು. 3 ರನ್‌ಗಳಿಸಿದ ಸ್ನೇಹ್ ಮಹಾರಾ ಅವರದ್ದೇ ಗರಿಷ್ಠ ಸ್ಕೋರ್ ! 6 ಮಂದಿ ಬ್ಯಾಟರ್‌ಗಳು ಶೂನ್ಯಕ್ಕೆ ನಿರ್ಗಮಿಸಿದರು. ಇತರೇ ರನ್‌ಗಳ ರೂಪದಲ್ಲಿ ಯುಎಇ 3 ರನ್ ನೀಡದೇ ಇರುತ್ತಿದ್ದರೆ ನೇಪಾಳ 5 ರನ್‌ಗಳಿಗೆ ಗಂಟೂಮೂಟೆ ಕಟ್ಟುತ್ತಿತ್ತು. 

4.2 ಓವರ್ ಎಸೆದ ಮಹಿಕಾ ಗೌರ್, ಕೇವಲ 2 ರನ್ ನೀಡಿ 5 ವಿಕೆಟ್ ಪಡೆದರೆ, ಇಂಧುಜಾ ನಂದಕುಮಾರ್ 6 ರನ್ ನೀಡಿ, 3 ವಿಕೆಟ್ ಕಬಳಿಸಿದರು. ತನ್ನ ಪ್ರಥಮ ಎಸೆತದಲ್ಲೇ ವಿಕೆಟ್ ಪಡೆದ ಸಮೀರ ಧರಣಿಧರಕ ನೇಪಾಳ ಬ್ಯಾಟಿಂಗ್‌ಗೆ ಸಮಾಪ್ತಿ ಹಾಡಿದರು.  

8 ರನ್‌ಗಳ ಗುರಿ ಬೆನ್ನತ್ತಿದ UAE ತಂಡವು 1.1 ಓವರ್‌ಗಳಲ್ಲಿ ಗುರಿಮುಟ್ಟುವ ಮೂಲಕ 10 ವಿಕೆಟ್ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ನೇಪಾಳ, ಭೂತಾನ್, ಥಾಯ್ಲೆಂಡ್, ಖತಾರ್ ಮತ್ತು ಯುಎಇ ದೇಶಗಳ ನಡುವೆ ಟಿ-20 ವಿಶ್ವಕಪ್ ಅರ್ಹತಾ ಸುತ್ತಿನಾ ಪಂದ್ಯಾವಳಿ ನಡೆಯುತ್ತಿದೆ. ವಿಜೇತ ತಂಡವು ಮುಂದಿನ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ICC U19 ಮಹಿಳಾ T20 ವಿಶ್ವಕಪ್ನಲ್ಲಿ ಸ್ಥಾನ ಪಡೆಯಲಿದೆ.

ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಅತೀ ಕಡಿಮೆ ರನ್‌ಗಳಿಸಿದ ಕೆಟ್ಟ ದಾಖಲೆ ಟರ್ಕಿ ದೇಶದ ಹೆಸರಿನಲ್ಲಿದೆ. 2019 ರಲ್ಲಿ ಚೆಕ್ ರಿಪಬ್ಲಿಕ್ ವಿರುದ್ದದ ಪಂದ್ಯದಲ್ಲಿ ಟರ್ಕಿ ತಂಡವು ಕೇವಲ 21 ರನ್‌ಗಳಿಗೆ ಆಲೌಟ್ ಆಗಿತ್ತು. ಇನ್ನು ಟೀಮ್ ಇಂಡಿಯಾ ಟಿ-20  ಕ್ರಿಕೆಟ್‌ನಲ್ಲಿ ಗಳಿಸಿದ ಅತೀ ಕಡಿಮೆ ರನ್ ಎಂದರೆ 74. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡವು ಕೇವಲ 74 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತ್ತು.

Join Whatsapp
Exit mobile version