ತ್ರಿಪೊಲಿ : ಲಿಬಿಯಾದ ಕರಾವಳಿ ತೀರದಲ್ಲಿ ನಡೆದ ಹಡಗು ದುರಂತವೊಂದರಲ್ಲಿ 74 ವಲಸಿಗರು ಸಾವಿಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ.
ಲಿಬಿಯಾದ ಅಲ್-ಖೊಮ್ಸ್ ಕರಾವಳಿ ತೀರದಲ್ಲಿ ದುರಂತ ಸಂಭವಿಸಿದೆ. ಕರಾವಳಿ ರಕ್ಷಣಾ ಪಡೆ ಮತ್ತು ಮೀನುಗಾರರು ದುರಂತದಲ್ಲಿ ಜೀವಂತವಾಗಿ ಪಾರಾಗಿರುವವರನ್ನು ಹುಡುಕುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ವಲಸಿಗರ ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ.
ಹಡಗಿನಲ್ಲಿ 120ಕ್ಕೂ ಹೆಚ್ಚು ಜನರಿದ್ದರು. ಅದರಲ್ಲಿ ಮಕ್ಕಳು ಮತ್ತು ಮಹಿಳೆಯರೂ ಇದ್ದರು. 47 ಮಂದಿಯನ್ನು ಜೀವಂತವಾಗಿ ಸುರಕ್ಷಿತವಾಗಿ ದಡಕ್ಕೆ ತಲುಪಿಸಲಾಗಿದೆ. 31 ಮೃತದೇಹ ಪತ್ತೆಯಾಗಿದೆ.
ಕಳೆದ 20 ವರ್ಷಗಳಲ್ಲಿ ಈ ಅಪಾಯಕಾರಿ ಹಾದಿಯಲ್ಲಿ 20,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. 2011ರಲ್ಲಿ ಸರ್ವಾಧಿಕಾರಿ ಮೊಅಮ್ಮರ್ ಗದಾಫಿ ಅಧಿಕಾರ ಪತನದ ನಂತರ ಮಾನವ ಕಳ್ಳ ಸಾಗಣೆದಾರರು, ಅಪಾಯದ ಅರಿವಿದ್ದರೂ ಈ ಹಾದಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಯುದ್ಧ ಮತ್ತು ಬಡತನದ ಬೇಗೆಯಿಂದ ತಪ್ಪಿಸಿಕೊಳ್ಳಲು ವಲಸಿಗರು ಈ ದಾರಿ ಬಳಸಿ, ಯುರೋಪ್ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಇವರಲ್ಲಿ ಅನೇಕರು ಯುರೋಪ್ ರಾಷ್ಟ್ರಗಳ ಕರಾವಳಿ ಭದ್ರತಾ ಪಡೆಗಳ ವಶಕ್ಕೆ ಸಿಕ್ಕಿ, ಭಯಾನಕ ಸ್ಥಿತಿ ಎದುರಿಸುತ್ತಿದ್ದಾರೆ. ಕೆಲವರು ಲಿಬಿಯಾಕ್ಕೆ ಹಿಂದಿರುಗಿಸಲ್ಪಟ್ಟಿದ್ದಾರೆ.