Home ಟಾಪ್ ಸುದ್ದಿಗಳು ಬೆಂಗಳೂರು ನಗರದಲ್ಲಿ 7 ಸಾವಿರ ಸಿಸಿ ಕ್ಯಾಮೆರಾ ಅಳವಡಿಕೆಗೆ ಸಿದ್ಧತೆ

ಬೆಂಗಳೂರು ನಗರದಲ್ಲಿ 7 ಸಾವಿರ ಸಿಸಿ ಕ್ಯಾಮೆರಾ ಅಳವಡಿಕೆಗೆ ಸಿದ್ಧತೆ

ಬೆಂಗಳೂರು: ಕೊಲೆ ಸುಲಿಗೆ, ಸರ ಅಪಹರಣ ಸೇರಿ ಅಪರಾಧ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯಗಳಿಗೆ ಕಡಿವಾಣ ಹಾಕಲು ರಾಜಧಾನಿ ಬೆಂಗಳೂರಿನ 3 ಸಾವಿರ ಸ್ಥಳಗಳಲ್ಲಿ 7 ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.


ಕೇಂದ್ರ ಸರ್ಕಾರದ ಸೇಫ್ ಸಿಟಿ ಯೋಜನೆಯಡಿ ಸಿಸಿ ಕ್ಯಾಮೆರಾ ಅಳವಡಿಸಲು ಹನಿವೆಲ್ ಆಟೊಮೇಷನ್ ಇಂಡಿಯಾ ಕಂಪನಿಯು ಟೆಂಡರ್ ಪಡೆದಿದ್ದು ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ.
ಕೇಂದ್ರ ಗೃಹ ಇಲಾಖೆಯು ಬೆಂಗಳೂರು ಸೇರಿದಂತೆ 8 ನಗರಗಳು ಸೇಫ್ ಸಿಟಿ ಯೋಜನೆಗೆ ಈಗಾಗಲೇ ಆಯ್ಕೆಯಾಗಿದ್ದು, ಈ ನಿಟ್ಟಿನಲ್ಲಿ ಕಳೆದ ತಿಂಗಳಷ್ಟೇ ಹನಿವೆಲ್ ಆಟೊಮೇಷನ್ ಇಂಡಿಯಾ ಕಂಪನಿ ಬಿಡ್ಡಿಂಗ್ ನಲ್ಲಿ ಭಾಗಿಯಾಗಿ ನಗರದಲ್ಲಿ 7 ಸಾವಿರ ಕ್ಯಾಮೆರಾ ಅಳವಡಿಸಲು ಜವಾಬ್ದಾರಿ ವಹಿಸಿಕೊಂಡಿದೆ.


ಬೆಂಗಳೂರಿನಲ್ಲಿ ಕಳ್ಳತನ, ಸರಗಳ್ಳತನ, ದರೋಡೆ, ಸುಲಿಗೆ, ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ಸೇರಿದಂತೆ ವಿವಿಧ ಮಾದರಿಯ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಅಪರಾಧ ನಿಯಂತ್ರಣಕ್ಕೆ ಪೊಲೀಸ್ ಗಸ್ತು, ನಿರಂತರ ಹೊಯ್ಸಳ ರೌಂಡ್ಸ್ ಹಲವು ಮುಂಜಾಗ್ರತ ಕ್ರಮ ಕೈಗೊಂಡರೂ ಸಂಪೂರ್ಣವಾಗಿ ತಹಬದಿಗೆ ಬರುತ್ತಿಲ್ಲ. ಹೀಗಾಗಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದೆ.
ನೀಲನಕ್ಷೆ ಸಿದ್ದ: ಸೇಫ್ ಸಿಟಿ ಯೋಜನೆಯಡಿ ಎಲ್ಲೆಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದರ ಬಗ್ಗೆ ನಗರ ಪೊಲೀಸರು ನೀಲನಕ್ಷೆ ರೂಪಿಸಿದ್ದಾರೆ. ಅಲ್ಲದೇ ಎದುರಾಗುವ ಸಾಧಕ – ಭಾದಕಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. 497 ಕೋಟಿ ರೂ. ಮೊತ್ತದ ಟೆಂಡರ್ ಪಡೆದಿರುವ ಕಂಪನಿ ಈಗಾಗಲೇ ಪ್ರಾಯೋಗಿಕವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ನಡೆಸಿದೆ.


ಜೂನ್ನಿಂದ ಹಂತ ಹಂತವಾಗಿ ಕ್ಯಾಮೆರಾ ಅಳವಡಿಸಲು ಕಂಪನಿ ಸಿದ್ಧತೆ ನಡೆಸಿದ್ದು, 2023ರ ಒಳಗೆ 3 ಸಾವಿರ ಸ್ಥಳದಲ್ಲಿ ಕ್ಯಾಮೆರಾ ಅಳವಡಿಕೆಗೆ ಡೆಡ್ಲೈನ್ ಇಟ್ಟುಕೊಂಡಿದೆ.
ಎಲ್ಲೆಲ್ಲಿ ಅಳವಡಿಕೆ: ಹೆಚ್ಚು ಅಪರಾಧ ಕೃತ್ಯ ನಡೆಯುವ ಸ್ಥಳಗಳಾದ ಮುಖ್ಯರಸ್ತೆಗಳು, ಬಸ್ ನಿಲ್ದಾಣ, ಪೆಟ್ರೋಲ್ ಬಂಕ್, ಚಿತ್ರಮಂದಿರ ಬಳಿ, ಪ್ರಮುಖ ಸರ್ಕಲ್ಗಳು ಸಾರ್ವಜನಿಕ ಸ್ಥಳ ಹಾಗೂ ಒಂದು ಏರಿಯಾದಿಂದ ಇನ್ನೊಂದು ಏರಿಯಾ ಸಂಪರ್ಕ ಕಲ್ಪಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಪೊಲೀಸರು ಮುಂದಾಗಿದ್ದಾರೆ.


ಜೊತೆಗೆ ಹೊರ ಜಿಲ್ಲೆಗಳಿಂದ ಬೆಂಗಳೂರು ಸಂಪರ್ಕಿಸುವ ಸ್ಥಳಗಳಾದ ನೈಸ್ ರೋಡ್, ಮೈಸೂರು ರಸ್ತೆ, ಬಳ್ಳಾರಿ, ತುಮಕೂರು ರೋಡ್ ಹಾಗೂ ಹಳೆಮದ್ರಾಸ್ ರಸ್ತೆ ಸೇರಿದಂತೆ ಇನ್ನಿತರ ಪ್ರಮುಖ ಪ್ರದೇಶಗಳಲ್ಲಿಯೂ ಸಿಸಿಟಿವಿ ಅಳವಡಿಸಲಾಗುತ್ತಿದೆ. ಕ್ಯಾಮೆರಾ ನಿರ್ವಹಣೆಗಾಗಿಯೇ ನಗರದಲ್ಲಿ ಪ್ರತ್ಯೇಕ ಕಮಾಂಡ್ ಸೆಂಟರ್ ನಿರ್ಮಾಣವಾಗಲಿದೆ.
ಸೇಫ್ ಸಿಟಿ ಯೋಜನೆ ಅನುಷ್ಠಾನಗೊಂಡರೆ ಸಂಚಾರಿ ನಿಯಮ ಉಲ್ಲಂಘನೆಗಳಿಗೂ ಬ್ರೇಕ್ ಹಾಕಬಹುದಾಗಿದೆ. ತ್ರಿಬಲ್ ರೈಡಿಂಗ್, ಹೆಲ್ಮೆಟ್ ರಹಿತ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ 21 ವಿವಿಧ ಮಾದರಿ ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆಹಚ್ಚಿ ಕಮಾಂಡ್ ಸೆಂಟರ್ಗೆ ಸಿಗ್ನಲ್ ಕಳುಹಿಸಲಿದೆ. ಅಲ್ಲಿಂದ ಸಂಬಂಧಪಟ್ಟ ವಾಹನ ಮಾಲೀಕರಿಗೂ ನೋಟಿಸ್ ನೀಡುವ ಕೆಲಸವಾಗಲಿದೆ.

Join Whatsapp
Exit mobile version