Home ಕರಾವಳಿ ದಕ್ಷಿಣ ಕನ್ನಡ : ಹೋಂ ಐಸೋಲೇಶನ್ ನಲ್ಲಿ ಶೇಕಡಾ 70ರಷ್ಟು ಸೋಂಕಿತರು – ಡಾ. ರಾಜೇಂದ್ರ...

ದಕ್ಷಿಣ ಕನ್ನಡ : ಹೋಂ ಐಸೋಲೇಶನ್ ನಲ್ಲಿ ಶೇಕಡಾ 70ರಷ್ಟು ಸೋಂಕಿತರು – ಡಾ. ರಾಜೇಂದ್ರ ಕೆ.ವಿ.

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಸೂಚ್ಯಂಕ ಕಡಿಮೆಯಾಗುವವರೆಗೂ ಹೆಚ್ಚಿನ ತಪಾಸಣೆಗಳನ್ನು ಕೈಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ನಿರ್ದೇಶನ ನೀಡಿದರು.

ಶನಿವಾರ ಕೋವಿಡ್-19 ಸೋಂಕಿನ ನಿಯಂತ್ರಣ ಕುರಿತು ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಬೆಂಗಳೂರಿನಿಂದ ವಿಡಿಯೋ ಸಂವಾದ ನಡೆಸಿ ಸೂಚನೆ ನೀಡಿದರು.

ಜಿಲ್ಲೆಯ ಗಡಿ ಭಾಗಗಳು, ನಗರ ಪ್ರದೇಶಗಳಲ್ಲಿ ಹೆಚ್ಚಿನ ಕೋವಿಡ್ ತಪಾಸಣೆ ಮಾಡಬೇಕು, ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆಗಳನ್ನು ನೀಡಬೇಕು, ಇದರಿಂದ ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಕೊರೊನಾ ಸೂಚ್ಯಂಕವನ್ನು ಇಳಿಕೆ ಮಾಡುವಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂಗಳು ಜಾರಿಯಲ್ಲಿದ್ದು, ಸರ್ಕಾರದ ಮುಂದಿನ ಆದೇಶದವರೆಗೂ ಸಾರ್ವಜನಿಕರು ಕಡ್ಡಾಯವಾಗಿ ಈ ನಿರ್ದೇಶನಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 2,240 ಕೋವಿಡ್ ಸಕ್ರಿಯ ಪ್ರಕರಣಗಳಿದ್ದೂ, ಶೇ.70 ರಷ್ಟು ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ ಹಾಗೂ ಶೇ. 30 ರಷ್ಟು ಆಸ್ಪತ್ರೆ ಸೇರಿದಂತೆ ವಿವಿಧ ಕೋವಿಡ್ ಕೇರ್ ಸೆಂಟರ್‍ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಉಪವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕಿಶೋರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ವಿಸಿಯಲ್ಲಿ ಭಾಗವಹಿಸಿದ್ದರು.

Join Whatsapp
Exit mobile version