ದಾವಣಗೆರೆ: ವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಜಗಳೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 13ರ ಕಣಕಟ್ಟೆ ಟೋಲ್ ಬಳಿ ಇಂದು ನಸುಕಿನಲ್ಲಿ ನಡೆದಿದೆ.
ಮೃತರನ್ನು ಮಲ್ಲನ ಗೌಡ(22), ಸಂತೋಷ್(21), ಸಂಜೀವ್(20), ಜೈಭೀಮ್(18), ರಾಘು(23), ಸಿದ್ದೇಶ್(20), ವೇದಮೂರ್ತಿ(18) ಎಂದು ಗುರುತಿಸಲಾಗಿದೆ.
ಮೃತರಲ್ಲಿ ನಾಲ್ವರು ಯಾದಗಿರಿಯ ಶಾಹಪುರದವರಾಗಿದ್ದರೆ, ಇಬ್ಬರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೂಲದವರು, ಓರ್ವ ವಿಜಯಪುರ ಜಿಲ್ಲೆಯ ತಾಳಿಕೋಟೆಯವನಾಗಿದ್ದಾನೆ.
ಕಾರು ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಆರು ಜನ ಸಾವನಪ್ಪಿದ್ದರೆ ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.
ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ರಭಸವಾಗಿ ಬರುತ್ತಿದ್ದಾ ಕಾರು ಚಲಾಯಿಸುತ್ತಿದ್ದ ಕಾರು ಚಾಲಕ ಮದ್ಯ ಸೇವಿಸಿ ನಿದ್ದೆಗೆ ಜಾರಿದ ಪರಿಣಾಮ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.
ಮೃತದೇಹಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.
ಕೆಎ 51 ಡಿ 5066 ನೊಂದಣಿಯ ಇಂಡಿಕಾ ಕಾರು ಬೆಂಗಳೂರಿನಿಂದ ಹೊಸಪೇಟೆ ಕಡೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ಇನ್ನು ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.