Home ಟಾಪ್ ಸುದ್ದಿಗಳು ಆರು ತಿಂಗಳು ಕ್ರಿಕೆಟ್‌ ಅಂಗಣದಿಂದ ದೂರ ಉಳಿಯಲಿರುವ ರಿಷಭ್‌ ಪಂತ್

ಆರು ತಿಂಗಳು ಕ್ರಿಕೆಟ್‌ ಅಂಗಣದಿಂದ ದೂರ ಉಳಿಯಲಿರುವ ರಿಷಭ್‌ ಪಂತ್

ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಪೂರ್ಣವಾಗಿ ಚೇತರಿಸಿಕೊಳ್ಳಲು ಮೂರರಿಂದ ಆರು ತಿಂಗಳು ಸಮಯ ತೆಗೆದುಕೊಳ್ಳಬಹುದು ಎಂದು ಪಂತ್‌ಗೆ ಚಿಕಿತ್ಸೆ ನೀಡುತ್ತಿರುವ ತಂಡದ ಮುಖ್ಯಸ್ಥರಾದ ಏಮ್ಸ್’ನ ಡಾ ಖಮರ್‌ ಅಝಂ ತಿಳಿಸಿದ್ದಾರೆ.

ದೆಹಲಿಯಿಂದ ರೂರ್ಕಿಯಲ್ಲಿರುವ ಮನೆಗೆ ಮರಳುತ್ತಿದ್ದ ವೇಳೆ, ಶುಕ್ರವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ, ರಿಷಭ್‌ ಪಂತ್‌ ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಪಂತ್‌ ಹಣೆ, ಮೊಣಕಾಲಿನ ಅಸ್ಥಿರಜ್ಜು, ಮಣಿಕಟ್ಟು, ಕಾಲು ಮತ್ತು ಬೆನ್ನಿಗೆ ಬಲವಾದ ಗಾಯಗಳಾಗಿವೆ.

ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಪಂತ್, ಶನಿವಾರ ಮೊಣಕಾಲು ಮತ್ತು ಪಾದದ ಗಾಯದ ಪರೀಕ್ಷೆಗೆ ಒಳಗಾಗಲಿದ್ದಾರೆ. ತೀವ್ರ ಗಾಯಗಳಿದ್ದರೂ ಸಹ ಪಂತ್‌ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್’ನ ಡಾ ಖಮರ್‌ ಅಝಂ ಹೇಳಿದ್ದಾರೆ. “ಪಂತ್ ಅಸ್ಥಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಮೂರರಿಂದ ಆರು ತಿಂಗಳು ತೆಗೆದುಕೊಳ್ಳಬಹುದು. ಗಾಯವು ತೀವ್ರವಾಗಿದ್ದರೆ, ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಗಾಯದ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಅಝಂ ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿ, ಆ ಬಳಿಕ ಐಪಿಎಲ್‌ ಸೇರಿದಂತೆ ಹಲವು ಪ್ರಮುಖ ಟೂರ್ನಿಗಳಿಂದ ಪಂತ್‌ ಅನಿವಾರ್ಯವಾಗಿ ಹೊರಗುಳಿಯಬೇಕಾಗಿದೆ.

ಅಪಘಾತಕ್ಕೂ ಮೊದಲೇ ಪಂತ್, ಮೊಣಕಾಲು ಮತ್ತು ಪಾದದ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಜನವರಿ 6ರಿಂದ ಪಂತ್‌, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡಮಿಯಲ್ಲಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಬೇಕಾಗಿತ್ತು. ಆದರೆ ಶುಕ್ರವಾರದ ದುರ್ಘಟನೆಯ ಬಳಿಕ ಪಂತ್‌ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.

Join Whatsapp
Exit mobile version