Home ರಾಜ್ಯ ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ತರಗತಿಯಿಂದ ಶೇ.67ರಷ್ಟು ಬಾಲಕಿಯರು ವಂಚಿತ: ಸೇವ್ ದಿ ಚಿಲ್ಡ್ರನ್ ಸಂಸ್ಥೆ

ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ತರಗತಿಯಿಂದ ಶೇ.67ರಷ್ಟು ಬಾಲಕಿಯರು ವಂಚಿತ: ಸೇವ್ ದಿ ಚಿಲ್ಡ್ರನ್ ಸಂಸ್ಥೆ

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಕೊಳಗೇರಿ ಪ್ರದೇಶದ ಹೆಣ್ಣು ಮಕ್ಕಳ ಕುರಿತು ಸೇವ್ ದಿ ಚಿಲ್ಡ್ರನ್ ಅಧ್ಯಯನ ನಡೆಸಿದ್ದು, ಆತಂಕಕಾರಿ ವಿಷಯಗಳನ್ನು ವರದಿಯಲ್ಲಿ ಬಹಿರಂಗ ಪಡಿಸಿದೆ.

ಬುಧವಾರ ವರ್ಚುವಲ್ ಮೂಲಕ “ ದಿ ವರ್ಲ್ಡ್ ಆಫ್ ಇಂಡಿಯನ್ ಗರ್ಲ್ಸ್-ವಿಂಗ್ಸ್ 2022” ಶೀರ್ಷಿಕೆಯಲ್ಲಿ ಸೇವ್ ದಿ ಚಿಲ್ಡ್ರನ್ ಸಂಸ್ಥೆಯು ವರದಿ ಬಿಡುಗಡೆ ಮಾಡಿದೆ. ಕೋವಿಡ್ ಸಾಂಕ್ರಮಿಕದ ಕಾರಣ ಬಾಲಕರಿಗಿಂತ ಬಾಲಕರಿಯರೇ ಹೆಚ್ಚಾಗಿ ಶಾಲೆ ತೊರೆದಿದ್ದಾರೆ. ಕೊಳಚೆ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಶೇ.67ರಷ್ಟು ಬಾಲಕಿಯರು ಆನ್ ಲೈನ್ ತರಗತಿಯನ್ನು ಹಾಜರಾಗಲು ಸಾಧ್ಯವಾಗದೇ ಶಾಲೆ ತೊರೆಯುವಂತಾಗಿದೆ. ಜೊತೆಗೆ, ಆನ್ ಲೈನ್ ತರಗತಿಗೆ ಹಾಜರಾಗಲು ಮೊಬೈಲ್, ಇಂಟರ್ ನೆಟ್ ಸೇರಿದಂತೆ ಇತರೆ ಸೌಕರ್ಯದ ಕೊರತೆಯಿಂದಾಗಿ ಬಾಲಕಿಯರು ಶಿಕ್ಷಣ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಕೋವಿಡ್ ಮೊದಲು ಹಾಗೂ ಎರಡನೇ ಅಲೆಯಲ್ಲಿ ಎರಡು ವರ್ಷ ಬಾಲಕಿಯರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬಾಲ್ಯವಿವಾಹ ಹೆಚ್ಚಳ: ಮತ್ತೊಂದೆಡೆ ಶಾಲೆಯಿಂದ ವಂಚಿತರಾದ ಬಾಲಕಿಯರಿಗೆ 18 ವರ್ಷ ಪೂರ್ಣಗೊಳ್ಳುವ ಮೊದಲೇ ವಿವಾಹ ಮಾಡಿರುವ ಪ್ರಕರಣಗಳು ಹೆಚ್ಚಳವಾಗಿವೆ. ಕರ್ನಾಟಕ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ದೆಹಲಿ ಭಾಗದಲ್ಲಿ ಬಾಲಕಿಯರ ಕುರಿತು ಸಮೀಕ್ಷೆ ಹಾಗೂ ಅಧ್ಯಯನ ನಡೆಸಿದ್ದು, ಈ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.

ಇನ್ನು, ಶೇ.68ರಷ್ಟು ಬಾಲಕಿಯರು ಆರೋಗ್ಯ ಹಾಗೂ ಪೌಷ್ಠಿಕ ಆಹಾರ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ, ಶೇ.56ರಷ್ಟು ಮಕ್ಕಳು ಕೋವಿಡ್ ಸಂದರ್ಭದಲ್ಲಿ ಕ್ರೀಡೆ ಹಾಗೂ ಮನರಂಜನೆಯಿಂದ ವಂಚಿತರಾಗಿದ್ದಾರೆ. ಒಟ್ಟಾರೆ, ಕೋವಿಡ್ ಸಂದರ್ಭದಲ್ಲಿ ಬಡ ಹಾಗೂ ಕೊಳಗೇರಿ ಪ್ರದೇಶದಲ್ಲಿ ವಾಸವಿರುವ ಮಕ್ಕಳ ಮೇಲೆ ಅತಿ ಹೆಚ್ಚು ಪರಿಣಾಮ ಬೀರಿದೆ.

ವರದಿ ಬಿಡುಗಡೆ ಮಾಡಿ ಮಾತನಾಡಿದ ಸೇವ್ ದಿ ಚಿಲ್ಡ್ರನ್ ಸಿಇಒ ಸುದರ್ಶನ್ ಸುಚಿ,  ಕೊಳಗೇರಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಒಂದು ಹಂತಕ್ಕೆ ತಲುಪುವ ಸಂದರ್ಭದಲ್ಲಿ ಕೋವಿಡ್ನಿಂದಾಗಿ ಈ ಕನಸು ಭಗ್ನವಾಗಿದೆ. ನಮ್ಮ ಸಂಸ್ಥೆ ನಡೆಸಿದ ಅಧ್ಯಯನದ ಮೂಲಕ ತೆರೆಮರೆಯ ಸಮಸ್ಯೆಗಳಿಗೆ ಬೆಳಕು ಚೆಲ್ಲಿದೆ. ಈ ವರದಿಯನ್ನು ಆಯಾ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹೆಣ್ಣು ಮಕ್ಕಳಿಗೆ ಮೂಲಸೌಕರ್ಯ ಪಡೆದುಕೊಳ್ಳಲಲು ನೆರವಾಗಬೇಕು. ಹೆಣ್ಣು ಮಕ್ಕಳ ಅಪೌಷ್ಠಿಕತೆ ನೀಗಿಸುವುದು, ಶಿಕ್ಷಣಕ್ಕೆ ಆದ್ಯತೆ ನೀಡುವುದು, ಖಾಸಗಿ ವಲಯಗಳನ್ನು ಒಳಗೇರಿ ಪ್ರದೇಶದಲ್ಲಿನ ಈ ಮಕ್ಕಳ  ಆರೈಕೆಗೆ ಒತ್ತು ನೀಡಲು ಪ್ರೇರೇಪಿಸುವುದು, ಬಾಲಕಿಯ ದನಿ ಎತ್ತಿ ಹಿಡಿಯುವುದು, ಬಾಲಕಿಯರಿಗಾಗಿಯೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮ ಘೋಷಣೆ ಮಾಡಲು ಸಲಹೆ ನೀಡಿದ್ದೇವೆ ಎಂದು ವಿವರಿಸಿದರು.

Join Whatsapp
Exit mobile version