Home ಟಾಪ್ ಸುದ್ದಿಗಳು ದೇಶದಾದ್ಯಂತ 64.2 ಕೋಟಿ ಜನರಿಂದ ಮತದಾನ: ಚುನಾವಣಾ ಆಯೋಗ

ದೇಶದಾದ್ಯಂತ 64.2 ಕೋಟಿ ಜನರಿಂದ ಮತದಾನ: ಚುನಾವಣಾ ಆಯೋಗ

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ 31.2 ಕೋಟಿ ಮಹಿಳಾ ಮತದಾರರು ಸೇರಿ 64.2 ಕೋಟಿ (ಒಟ್ಟು ಮತದಾರರ ಸಂಖ್ಯೆ 96.88 ಕೋಟಿ) ಮತದಾರರು ಹಕ್ಕು ಚಲಾಯಿಸಿದ್ದು, ವಿಶ್ವ ದಾಖಲೆಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸೋಮವಾರ ತಿಳಿಸಿದ್ದಾರೆ.


ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನಾವೇ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತ ಪಿ.ರಾಜೀವ್ ಕುಮಾರ್ , ಈ ಬಾರಿ 64.2 ಕೋಟಿಗೂ ಅಧಿಕ ಮತದಾರರು ಮತದಾನ ಮಾಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ. ಜೊತೆಗೆ ಮಹಿಳೆಯರೂ ದಾಖಲೆ ಮಟ್ಟದಲ್ಲಿ ಮತ ಚಲಾಯಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಇದು G7 ರಾಷ್ಟ್ರಗಳಿಗಿಂತ 1.5 ಪಟ್ಟು ಹಾಗೂ 27 ಯುರೋಪಿಯನ್ ರಾಷ್ಟ್ರಗಳಿಗಿಂತಲೂ 2.5 ಪಟ್ಟು ಹೆಚ್ಚಾಗಿದೆ. ಅಲ್ಲದೇ ದೇಶದಲ್ಲಿ 31 ಕೋಟಿ ಮಹಿಳಾ ಮತದಾರರು ಮತ ಚಲಾಯಿಸಿದ್ದು, ಇದೇ ಮೊದಲಬಾರಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಮತದಾರ ಪ್ರಭುಗಳಿಗೆ ಆಯೋಗದ ಅಧಿಕಾರಿಗಳು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದಿಸಿದರು.


2024ರ ಲೋಕಸಭಾ ಚುನಾವಣೆ ಕರ್ತವ್ಯ ನಿರ್ವಹಣೆಗೆ ಸುಮಾರು 4 ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ವಿಮಾನಗಳನ್ನು ಬಳಸಲಾಗಿದೆ. 39 ಕೇಂದ್ರಗಳಲ್ಲಿ ಮಾತ್ರವೇ ಮರುಮತದಾನ ನಡೆದಿದೆ. ಜಮ್ಮು ಮತ್ತು ಕಾಶ್ಮೀರವು ಕಳೆದ 4 ದಶಕಗಳಲ್ಲಿ ದಾಖಲೆಯ ಶೇ.58.58 ಮತ್ತು ಕಾಶ್ಮೀರದಲ್ಲಿ ಶೇ.51.05 ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಡ್ರಗ್ಸ್, ನಗದು, ಚಿನ್ನಾಭರಣ ಸೇರಿ 10,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರಲ್ಲಿ ಇದರ ಪ್ರಮಾಣ 3,500 ಕೋಟಿ ರೂ.ಗಳಷ್ಟಿತ್ತು ಎಂದು ಮಾಹಿತಿ ಹಂಚಿಕೊಂಡರು.

Join Whatsapp
Exit mobile version