ಹಾಸನ ಕಾರು ಅಪಘಾತದಲ್ಲಿ 6 ಮಂದಿ ಸ್ಥಳದಲ್ಲಿಯೇ ಮೃತ: ಅನಾಥ ಹುಡುಗಿಯರಿಗೆ ಶಾಸಕ ಪ್ರದೀಪ್ ಈಶ್ವರ್ ನೆರವು

Prasthutha|

ಬೆಂಗಳೂರು: ಹಾಸನದಲ್ಲಿ ಇಂದು ಬೆಳಗ್ಗೆ ಹಾಸನದ ಹೊರ ವಲಯ ಈಚನಹಳ್ಳಿಯಲ್ಲಿ ಟ್ರಕ್‌ ಡಿಕ್ಕಿಯಾಗಿ ಕಾರಿನಲ್ಲಿದ್ದ ಮಗು ಸೇರಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

- Advertisement -

ಅಪಘಾತದಲ್ಲಿ ಪಲ್ಲವಿ ಹಾಗೂ ಪೂರ್ಣಿಮಾ ಎಂಬ ಇಬ್ಬರು ಹುಡುಗಿಯರು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದು, ಅವರು ಚಿಕ್ಕಬಳ್ಳಾಪುರ ತಾಲೂಕಿನ ಚಿಗಟೇನಹಳ್ಳಿ ಅಜ್ಜಿಯ ಮನೆಯಲ್ಲಿದ್ದಾರೆ. ಆ ಇಬ್ಬರು ಬಾಲಕಿಯರನ್ನು ಭೇಟಿ ಮಾಡಿದ ಶಾಸಕ ಪ್ರದೀಪ್ ಈಶ್ವರ್, ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಇಬ್ಬರ ಹೆಸರಿನಲ್ಲಿ ತಲಾ ಒಂದು ಲಕ್ಷ ಪೋಸ್ಟಲ್ ಡಿಪಾಸಿಟ್ ಮಾಡುವ ಭರವಸೆ ನೀಡಿ, ಇಬ್ಬರಿಗೂ ಉಚಿತ ವಿದ್ಯಾಭ್ಯಾಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಹಾಸನದ ಹೊರ ವಲಯ ಈಚನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 75ರ ಕಂದಲಿ ಸಮೀಪದ ಇಂದು ಬೆಳಗಿನ ಜಾವ 6:30 ರಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂರು ಪುರುಷರು, ಒಂದು ಮಗು ಸೇರಿ 6 ಮಂದಿ ಮೃತರಾಗಿದ್ದಾರೆ. ಒಂದೇ ಕುಟುಂಬದ ನಾರಾಯಣ ಸ್ವಾಮಿ, ಸುನಂದಾ, ರವಿಕುಮಾರ್, ನೇತ್ರ,ಚೇತನ್ (ಬಾಲಕ), ರಾಕೇಶ್ (ಡ್ರೈವರ್) ಮೃತರು. ಎಲ್ಲರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು.ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು KA-53-C.1419 ನಂಬರ್‌ನ ಇಟಿಯೋಸ್ ಕಾರಿನಲ್ಲಿ ತೆರಳಿದ್ದ ಕುಟುಂಬ ಸದಸ್ಯರು ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

Join Whatsapp
Exit mobile version