ತಿರುವನಂತಪುರ: ಕೇರಳದ ಕಣ್ಣೂರಿನ ಮಾಟೂಲ್ ಮೂಲದ ಅಪರೂಪದ ಕಾಯಿಲೆಗೆ ತುತ್ತಾದ ಒಂದೂವರೆ ವರ್ಷದ ಮಗು ಮೊಹಮ್ಮದ್ ನ ಚಿಕಿತ್ಸೆಗೆ ಅಗತ್ಯವಾದ ಝೋಲ್ಜೆನ್‌ಸ್ಮಾ ಔಷಧದ ಮೇಲಿನ ಆಮದು ಸುಂಕ ಮತ್ತು ಜಿಎಸ್ಟಿ ಕಡಿತಗೊಳಿಸುವಂತೆ ಕೋರಿ ರಾಜ್ಯಸಭಾ ಸದಸ್ಯ ಎಳಮರಂ ಕರೀಮ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಝೋಲ್ಜೆನ್‌ಸ್ಮಾ ಔಷಧದ ಬೆಲೆ ಸುಮಾರು 18 ಕೋಟಿ ರೂ. ಶೇಕಡಾ 23 ರಷ್ಟು ಆಮದು ಸುಂಕ ಮತ್ತು ಶೇಕಡಾ 12ರಷ್ಟು ಜಿಎಸ್‌ಟಿ ಸೇರಿದಾಗ ಕೇವಲ ತೆರಿಗೆಗಾಗಿ 6.5 ಕೋಟಿ ರೂ. ಖರ್ಚಾಗಲಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಹಾರಾಷ್ಟ್ರದ ಥೀರಾ ಎಂಬ ಮಗುವಿಗೆ ಅದೇ ಔಷಧದ ಮೇಲಿನ ತೆರಿಗೆಯನ್ನು ಕೇಂದ್ರವು ಮನ್ನಾ ಮಾಡಿತ್ತು.
ಮುಹಮ್ಮದ್ ವಿಷಯದಲ್ಲೂ ಇದೇ ರೀತಿ ಮಧ್ಯ ಪ್ರವೇಶಿಸಬೇಕೆಂದು ಎಳಮರಂ ಕರೀಮ್ ಒತ್ತಾಯಿಸಿದ್ದಾರೆ. “ಸ್ಪೆನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪರೂಪದ ಖಾಯಿಲೆಯಿಂದ ಮೊಹಮ್ಮದ್ ಬಳಲುತ್ತಿದ್ದು, ಔಷಧಿಯನ್ನು ಆದಷ್ಟು ಬೇಗ ತಲುಪಿಸಲು ರಾಜ್ಯ ಸರ್ಕಾರ ಮತ್ತು ಆಸ್ಪತ್ರೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕೇಂದ್ರವು ಮಧ್ಯಪ್ರವೇಶಿಸಿ ತೆರಿಗೆಯನ್ನೂ ಕಡಿತಗೊಳಿಸಬೇಕು. ಸಂಬಂಧಪಟ್ಟವರಿಗೆ ಪ್ರಧಾನಿ ಸೂಚನೆಗಳನ್ನು ನೀಡಬೇಕೆಂದು ಪತ್ರದಲ್ಲಿ ಸಂಸದರು ಒತ್ತಾಯಿಸಿದ್ದಾರೆ.