ಅತೃಪ್ತ ಶಾಸಕರನ್ನು ‘ತೃಪ್ತಿ’ ಪಡಿಸುವ ಆಮಿಷದ ಮೂಲಕ ಬಿಜೆಪಿ ಅಪರೇಶನ್ ಕಮಲ ನಡೆಸಿ ಮೈತ್ರಿ ಸರ್ಕಾರ ಬೀಳಿಸಿತ್ತೇ ?

Prasthutha|

► ಸಿಡಿ – ಕೋರ್ಟ್ ಅರ್ಜಿ ಬಿಚ್ಚಿಟ್ಟ ರಹಸ್ಯಗಳು…?

- Advertisement -

ರಾಜ್ಯದಲ್ಲಿ ಈಗ ಸಿಡಿಗಳದ್ದೇ ಹವಾ ಎದ್ದು ಬಿಟ್ಟಿದೆ. ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಹಗರಣದ ಸಿಡಿ ಬಹಿರಂಗವಾದ ಮೇಲೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಂಗಾಲಾಗಿದೆ. ಒಂದರ ಮೇಲೆ ಮತ್ತೊಂದು ಶಾಕಿಂಗ್ ಸುದ್ದಿಗಳು ಪಕ್ಷವನ್ನು ಅಪ್ಪಿಕೊಳ್ಳುತ್ತಲೇ ಇದೆ. ಇದೀಗ ಅಪರೇಶನ್ ಕಮಲವೆಂಬ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ಮೈತ್ರಿ ಸರಕಾರವನ್ನು ಬೀಳಿಸಿ ರಚಿಸಿದ್ದ ಬಿಜೆಪಿ ಪಕ್ಷಕ್ಕೆ ಒಂದು ಕಾಲದಲ್ಲಿ ತಮಗೆ ನೆರವಾಗಿದ್ದ ‘ಅತೃಪ್ತ’ ಶಾಸಕರಿಂದಾಗಿ ತಲೆ ನೋವು ಶುರುವಾಗಿದೆ. ಜಾರಕಿಹೊಳಿ ಪ್ರಕರಣದದ ನಂತರ ‘ಅತೃಪ್ತ’ 6 ಶಾಸಕರು ತಮ್ಮ ವಿರುದ್ಧದ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸಬಾರದೆಂದು ಕೊರ್ಟ್ ಮೊರೆ ಹೋಗಿ ಸದ್ಯಕ್ಕೆ ಕೆಲ ಕಾಲ ನಿರಾಳರಾಗಿದ್ದಾರೆ.  ಆದರೆ ಇವರೆಲ್ಲಾ ಅಮಾಯಕರಾಗಿದ್ದರೆ ಯಾಕೆ ನಿರೀಕ್ಷಣಾ ಜಾಮೀನು ಪದೆದುಕೊಳ್ಳುವ ರೀತಿಯಲ್ಲಿ ಕೋರ್ಟ್ ಮೊರೆ ಹೋಗಬೇಕಾಗಿತ್ತು ಎಂದು ಸಾರ್ವಜನಿಕಾರು ಪ್ರಶ್ನಿಸುತ್ತಿದ್ದಾರೆ.

ಈ ಅತೃಪ್ತ ಶಾಸಕರ ಕೋರ್ಟ್ ಗೆ ಹೋಗಿರುವ ನಡೆಯಿಂದಾಗಿ ಬಿಜೆಪಿಯು ಮೈತ್ರಿ ಸರ್ಕಾರವನ್ನು ಬೀಳಿಸಿ ತಮ್ಮ ಪಕ್ಷದ ಸರಕಾರ ರಚಿಸಿದ್ದು ಹೇಗೆ ಎಂಬ ಅನುಮಾನ ಸಾರ್ವಜನಿಕರಿಗೆ ಕಾಡುತ್ತಿದೆ. ‘ಅತೃಪ್ತ’ರನ್ನು ಮುಂಬೈಗೆ ಕರೆಸಿಕೊಂಡು ಅವರನ್ನು ಹಲವು ಆಮಿಷಗಳ ಮೂಲಕ ಖೆಡ್ಡಾಕ್ಕೆ ಬೀಳಿಸಲಾಯಿತೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.  ಎಲ್ಲಾ ಅತೃಪ್ತರಿಗೆ ಹಣದ ಜೊತೆಗೆ ಲೈಂಗಿಕ ಆಮಿಷಗಳನ್ನೂ ಒಡ್ಡಲಾಗಿತ್ತೇ ಎನ್ನುವುದು ಸದ್ಯದ ಅನುಮಾನವಾಗಿದೆ.  ಮೂಲಗಳ ಪ್ರಕಾರ ಈಗ ಕೋರ್ಟ್ ಗೆ ಹೋಗಿರುವವರು ಕೇವಲ 6 ಮಂದಿಯಾದರೂ, ಕನಿಷ್ಟ ಹತ್ತಕ್ಕೂ ಹೆಚ್ಚು ಮಂದಿ ಶಾಸಕರು ಇಂದಿನ ಮಧ್ಯಂತರ ತೀರ್ಪಿನ ಬಳಿಕ ಮತ್ತೆ ಕೋರ್ಟ್ ಬಾಗಿಲು ತಟ್ಟಲಿದ್ದಾರೆ ಎನ್ನಲಾಗಿದೆ.

- Advertisement -

ಹಾಗಾದರೆ ಈ ಎಲ್ಲಾ ಶಾಸಕರಿಗೆ ಒಡ್ಡಿದ ಆಮಿಷಗಳೇನು ಎನ್ನುವುದು ಸಮರ್ಥ ತನಿಖೆಯ ಮೂಲಕವೇ ಬಹಿರಂಗಗೊಳ್ಳಬೇಕಾಗಿದೆ. ಅದು ಮಾತ್ರವಲ್ಲ ಈ ಅತೃಪ್ತ ಶಾಸಕರು ರಮೇಶ್ ಜಾರಕಿಹೊಳಿ ಸಿಡಿಯ ನಂತರ ಬೆದರಿಕೊಂಡು ಕೋರ್ಟ್ ಮೊರೆ ಹೋಗಿರುವುದರ ಹಿಂದಿರುವ ರಹಸ್ಯವೇನು ಎನ್ನುವ ಕುರಿತೂ ತನಿಖೆಯಾಗಬೇಕಾಗಿದೆ. ಆದರೆ ಸಿಡಿ ಬಿಡುಗಡೆಗೊಳಿಸಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯವರನ್ನೇ ಅಪರಾಧಿ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿ ಸರ್ಕಾರ ಮತ್ತು ಕೆಲ ಕನ್ನಡ ಮಾಧ್ಯಮಗಳು ಇಂತಹಾ ತನಿಖೆಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಿದೆ ಎನ್ನುವುದು ಅನುಮಾನವಾಗಿದೆ.

2018 ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ 7 ದಿನಗಳಿಗಿಂತ ಹೆಚ್ಚು ಕಾಲ ಅಧಿಕಾರ ನಡೆಸಲಾಗಿರಲಿಲ್ಲ. ಆ ನಂತರ ಅಸ್ತಿತ್ವಕ್ಕೆ ಬಂದಿದ್ದ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಕೆಲ ಕಾಲ ಆಡಳಿತ ನಡೆಸಿತಾದರೂ ಬಳಿಕ ಹಲವು ಷಡ್ಯಂತ್ರಗಳಿಗೆ ಬಲಿಯಾಗಿ ಪತನದ ಹಾದಿ ಹಿಡಿದಿತ್ತು. ಮಧ್ಯೆ ಕೆಲ ಕನ್ನಡ  ಮಾಧ್ಯಮಗಳೂ ಎರಡು ಮೈತ್ರಿ ಪಕ್ಷಗಳ ಮಧ್ಯೆ ಕಂದಕವೇರ್ಪಡಿಸುವ ಕಾಂಟ್ರಾಕ್ಟ್ ಪಡೆದವರಂತೆ ವರ್ತಿಸಿದ್ದು ಕೂಡಾ ನಡೆದಿತ್ತು. ಕೊನೆಯಲ್ಲಿ ಉದ್ಭವವಾದ 16 ಮಂದಿ  ಅಧಿಕಾರಮೋಹಿ ಅತೃಪ್ತ ಶಾಸಕರು ನೇರವಾಗಿ ಮುಂಬೈ ತಲುಪಿದ್ದರು. ಪಟ್ಟು ಬಿಡದ ಶಾಸಕರ ಹಟದಿಂದಾಗಿ ಕೊನೆಯಲ್ಲಿ ಮೈತ್ರಿ ಸರಕಾರ ಪತನವಾಗಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು ಈಗ ಇತಿಹಾಸ.

Join Whatsapp