ಬೆಂಗಳೂರು; ರಾಮಯ್ಯ ಎವುಲೂಟ್, ಗೋಕುಲ ಶಿಕ್ಷಣ ಸಂಸ್ಥೆ ಹಾಗೂ ರಾಮಯ್ಯ ಸಮೂಹ ಸಂಸ್ಥೆಗಳ ನೆರವಿನಿಂದ ನಾವೀನ್ಯತೆ, ಭವಿಷ್ಯದ ಉತ್ಪನ್ನಗಳ ಉತ್ಪಾದನೆ, ಮುಂದಿನ ತಲೆಮಾರು ಬಳಕೆಯ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ 24 ನವೋದ್ಯಮಗಳ [ಸ್ಟಾರ್ ಸ್ಟಾರ್ಟ್ ಅಪ್ ಗಳು] ಅಭ್ಯುದಯಕ್ಕಾಗಿ ತಲಾ 50 ಲಕ್ಷ ರೂಪಾಯಿ ನೆರವು ನೀಡಿ ಗೌರವಿಸಲಾಯಿತು.
ಮತ್ತೀಕೆರೆಯ ಎಂ.ಎಸ್.ಆರ್.ಟಿ ಕ್ಯಾಂಪಸ್ ನಲ್ಲಿರುವ ಆಡಿಟೋರಿಯಂನಲ್ಲಿ ನವೋದ್ಯಮಗಳಿಗೆ ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾಕ್ಟರ್ ಎಂ.ಆರ್. ಜಯರಾಂ, ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಅವರು ಪ್ರಶಸ್ತಿ ಫಲಕ, ಬಹುಮಾನ ನೀಡಿ ಗೌರವಿಸಿದರು.
ಶುದ್ಧ ಹಸಿರು ತಂತ್ರಜ್ಞಾನ, ಸಾರಿಗೆ ತಂತ್ರಜ್ಞಾನ, ನಿರ್ಮಾಣ ವಲಯ, ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಆರೈಕೆ, ಭಾವನಾತ್ಮಕ ಮತ್ತು ಮಾನಸಿಕ ಯೋಗ ಕ್ಷೇಮ, ಸ್ವಾಸ್ತ್ಯ, ಸ್ವಚ್ಛ ತಂತ್ರಜ್ಞಾನ, ಕಾನೂನು, ಆಹಾರ ತಂತ್ರಜ್ಞಾನ ಹೀಗೆ ಹತ್ತು ಹಲವು ವಲಯಗಳಲ್ಲಿ ನಾವಿನತ್ಯತೆಯತ್ತ ಮುನ್ನಡೆದಿರುವ ಹಾಗೂ ಭವಿಷ್ಯದ ಆಶಾಕಿರಣವಾಗಿ ರೂಪುಗೊಳ್ಳುವ ಸಾಮರ್ಥ್ಯ ಹೊಂದಿರುವ ನವೋದ್ಯಮಗಳಿಗೆ ಪುಷ್ಟಿ ನೀಡಲಾಗಿದೆ.
ಸಮಾರಂಭದಲ್ಲಿ ಮಾತನಾಡಿದ ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾಕ್ಟರ್ ಎಂ.ಆರ್. ಜಯರಾಂ, ಬೆಳವಣಿಗೆ ಹಾದಿಯಲ್ಲಿರುವ ನವೋದ್ಯಮಗಳು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ನಾವು ನೀಡುತ್ತಿರುವ ನೆರವು ಕಡಿಮೆ ಇರಬಹುದು, ಆದರೆ ನಿಮ್ಮನ್ನು ಆಯ್ಕೆಮಾಡಿದ ಉದ್ದೇಶವನ್ನು ನೀವು ಸಾರ್ಥಕಗೊಳಿಸಬೇಕು ಎಂದು ಸಲಹೆ ಮಾಡಿದರು.
ಸಂಶೋಧನೆ ಮತ್ತು ನಾವೀನ್ಯತೆ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇವು ಬೇರೆ ಬೇರೆ ವಲಯಗಳಾಗಿವೆ. ಸಂಶೋಧನೆಗಾಗಿ ಮದ್ರಾಸ್, ಚೆನ್ನೈ ವಿಶ್ವವಿದ್ಯಾಲಗಳಲ್ಲಿ 500 ಕೋಟಿ ರೂ ಗೂ ಹೆಚ್ಚಿನ ಹಣವಿದೆ. ಹಣ ಇಲ್ಲದಿದ್ದರೆ ಯಾವುದೇ ಯೋಜನೆ, ಯಾವುದೇ ಉದ್ದೇಶ ಜಾರಿ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಹಣದ ಕೊರತೆ ಇದೆ. ಇಂತಹ ವಲಯಗಳ ಅಭಿವೃದ್ಧಿ, ಹೊಸತನವನ್ನು ಉತ್ತೇಜಿಸಲು ಇಂದು ಜಗತ್ತಿನ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ನಡೆಯುತ್ತಿದೆ. ಇದೊಂದು ಸಾಕಾರಾತ್ಮಕ ಸಂಗತಿ ಎಂದರು.
ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಮಾತನಾಡಿ, ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್. ರಾಮಯ್ಯ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ರಾಜ್ಯದಲ್ಲಿ ಉದ್ಯಮ ಶೀಲತೆ ಬೆಳೆಸಲು 1993 ರಲ್ಲಿಯೇ ಇಂತಹ ಪ್ರಯತ್ನಗಳಿಗೆ ಎಂ.ಎಸ್. ರಾಮಯ್ಯ ಅಡಿಪಾಯ ಹಾಕಿದ್ದರು. ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಅಂದರೆ ಮಾರ್ಚ್ 3 ರಂದು ರಾಮಯ್ಯ ಎವುಲೂಟ್ ಮೂಲಕ ಈ ಕಾರ್ಯಕ್ರಮ ರೂಪಿಸಿ 5 ತಿಂಗಳಲ್ಲೇ ಇದನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.
ಸ್ಟಾರ್ ಸ್ಟಾರ್ಟ್ ಅಪ್ ಗೆ ಆಯ್ಕೆಯಾದ ಸಂಸ್ಥೆಗಳು ನಾವೀನ್ಯತೆಯ ಹಾದಿಯಲ್ಲಿ ಮುನ್ನಡೆಯಬೇಕು. ನಿರಂತರ ಮೌಲ್ಯಮಾಪನಕ್ಕೆ ಒಳಗಾಗಬೇಕು. ಕುಸಿಯುತ್ತಿರುವ ದೇಶದ ಜಿಡಿಪಿಗೆ ಕೊಡುಗೆ ನೀಡುವಂತಾಗಬೇಕು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕು. ಕೋವಿಡ್ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದು ಎಂ.ಆರ್. ಸೀತಾರಾಂ ಸಲಹೆ ಮಾಡಿದರು.
ರಾಮಯ್ಯ ಎವುಲೂಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರಳಿ ಕೃಷ್ಣನ್ ಗೋಪಾಲ ಕೃಷ್ಣನ್, ರಾಮಯ್ಯ ಎವುಲೂಟ್ ಮಂಡಳಿಯ ಸಲಹೆಗಾರ ಮತ್ತು ಮುಖ್ಯ ಕಾರ್ಯತಂತ್ರಜ್ಞ ಸಮರ್ಥ ನಾಗಭೂಷಣಂ, ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ರಾಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಎಸ್. ರಾಮಪ್ರಸಾದ್ ಮತ್ತು ಎಂ.ಆರ್. ಶ್ರೀನಿವಾಸ ಮೂರ್ತಿ ಉಪಸ್ಥಿತರಿದ್ದರು.