ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಗುರುವಾರಕ್ಕೆ 50ನೇ ದಿನ ತಲುಪಿದ್ದು, ದೆಹಲಿಯ ತೀವ್ರ ಚಳಿ ಮತ್ತು ದಟ್ಟ ಮಂಜಿನ ನಡುವೆಯೂ ಹೋರಾಟ ಮುಂದುವರಿದಿದೆ. ಶುಕ್ರವಾರ ಸರ್ಕಾರದೊಂದಿಗೆ 9ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ. ಸಭೆಯಲ್ಲಿ ಪಾಲ್ಗೊಳ್ಳಲು ರೈತ ಮುಖಂಡರು ತೀರ್ಮಾನಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ದೆಹಲಿ ಗಡಿಯಲ್ಲಿ ರೈತ ಸಂಘಗಳ ಮುಖಂಡರು ಗುರುವಾರ ಸಭೆ ನಡೆಸಿ, ಮುಂದಿನ ಹೋರಾಟ ಮತ್ತು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
ಸುಪ್ರೀಂ ಕೋರ್ಟ್ ಮಂಗಳವಾರ ಹೊಸ ಕೃಷಿ ಕಾನೂನುಗಳಿಗೆ ತಡೆ ನೀಡಿ, ಸಮಸ್ಯೆ ಇತ್ಯರ್ಥಕ್ಕಾಗಿ ನಾಲ್ಕು ಸದಸ್ಯರ ಸಮಿತಿ ರಚಿಸಲು ಆದೇಶಿಸಿತ್ತು.
ರೈತರ ಮುಖಂಡ ದರ್ಶನ್‌ಪಾಲ್ ಸಿಂಗ್ ಮಾತನಾಡಿ, ಸರ್ಕಾರದೊಂದಿಗೆ ಮುಂದಿನ ಸುತ್ತಿನ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಲಾಗಿದೆ. ಆದರೆ ಯಾವುದೇ ರೀತಿಯಲ್ಲಿ, ನಾವು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಮುಂದೆ ಹೋಗುವುದಿಲ್ಲ. ಸಮಿತಿ ರಚಿಸುವುದು ಕೇವಲ ವಿಳಂಬ ತಂತ್ರ ಎಂದು ಟೀಕಿಸಿದ್ದಾರೆ.