Home ಟಾಪ್ ಸುದ್ದಿಗಳು ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಉಲ್ಬಣ: ಪ್ರತಿಭಟನಾ ನಿರತ 45 ಮಂದಿಯ ಬಂಧನ; ಕರ್ಫ್ಯೂ ತೆರವು

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಉಲ್ಬಣ: ಪ್ರತಿಭಟನಾ ನಿರತ 45 ಮಂದಿಯ ಬಂಧನ; ಕರ್ಫ್ಯೂ ತೆರವು

ಕೊಲಂಬೊ: ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟು ತೀವ್ರ ಸ್ಪರೂಪ ಪಡೆದುಕೊಂಡಿದ್ದು, ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಷೆ ಅವರ ನಿವಾಸದ ಮುಂಭಾಗದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಕೊಲಂಬೊದ ಹಲವು ಕಡೆ ಹೇರಲಾಗಿದ್ದ ರಾತ್ರಿ ಕರ್ಫ್ಯೂವನ್ನು ಶುಕ್ರವಾರ ಮುಂಜಾನೆ ಹಿಂಪಡೆಯಲಾಗಿದೆ. ರಾಷ್ಟ್ರಪತಿ ನಿವಾಸದ ಎದುರು ಪ್ರತಿಭಟನಾ ನಿರತ 45 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ವಾಹನಕ್ಕೆ ಬೆಂಕಿ ಹಚ್ಚಿದ ಪರಿಣಾಮ ಐವರು ಪೊಲೀಸರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಶ್ರೀಲಂಕಾ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊಲಂಬೊ ಉತ್ತರ, ದಕ್ಷಿಣ, ಕೊಲಂಬೊ ಸೆಂಟ್ರಲ್, ನುಗೆಗೋಡ, ಮೌಂಟ್ ಲ್ಯಾವಿನಿಯಾ ಮತ್ತು ಕೆಲನಿಯಾ ಪೊಲೀಸ್ ವಿಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಶ್ರೀಲಂಕಾ ರಾಜಧಾನಿಯಲ್ಲಿರುವ ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ. ಆಕ್ರೋಶಿತ ಪ್ರತಿಭಟನಾಕಾರರು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Join Whatsapp
Exit mobile version