ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಂದು ಕಾಮಗಾರಿಯಲ್ಲೂ 40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಭ್ರಷ್ಟರ ಎದೆಯಲ್ಲಿ ಆತಂಕ ಹುಟ್ಟು ಹಾಕಿದೆ.
ಕಳೆದ ಹಲವಾರು ತಿಂಗಳಿಂದ ಈ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಡೆಸಬೇಕೆಂದು ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ದೂರು ನೀಡಿದ್ದರು. ಆದರೆ ಈ ಕುರಿತು ಪ್ರಧಾನಿಯವರು ಮೌನ ವಹಿಸಿದ್ದರು. ಆದರೆ ಇದೀಗ ಮತ್ತೆ ಅದಕ್ಕೆ ಮರುಜೀವ ಬಂದಂತಾಗಿದೆ.
ಪ್ರಧಾನಿ ಕಚೇರಿಯಿಂದ ದೂರುದಾರರಿಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುವಂತೆ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣಗೆ ಕರೆ ಬಂದಿದೆ ಎನ್ನಲಾಗುತ್ತಿದೆ.
ಈ ಮಧ್ಯೆ ಮೋದಿ ಬೆಂಗಳೂರಿಗೆ ಬರುವ ಮುನ್ನ ನಡೆದ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯ ವರದಿ ತರಿಸಿಕೊಂಡಿತ್ತು. ಈ ಬಗ್ಗೆನೂ ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತನಿಖೆಗೆ ಗೃಹ ಇಲಾಖೆಯ ತಂಡ ಬೆಂಗಳೂರಿಗೆ ಬರೋ ಸಾಧ್ಯತೆ ಇದೆ. ಗುತ್ತಿಗೆದಾರರ ಸಂಘವೂ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಆರೋಪ ಮಾಡಿತ್ತು. ದಾಖಲೆಯನ್ನು ಸಿದ್ದಪಡಿಸಿಕೊಳ್ಳಲು ಪ್ರಧಾನಿ ಕಾರ್ಯಾಲಯ ಸೂಚಿಸಿದೆ ಎಂದು ಹೇಳಲಾಗಿದ್ದು, ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿ ಕಚೇರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗಳ ಮಧ್ಯೆ ಮಾತನಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ನನಗೆ ಪ್ರಧಾನಿಯವರ ಕಚೇರಿಯಿಂದ ಕರೆ ಬಂದಿಲ್ಲ. ಯಾವುದೇ ನೊಟೀಸ್ ಕೂಡ ಬಂದಿಲ್ಲ. ನಾನು ಕೆಲಸದ ಮೇಲೆ ಮೈಸೂರಿಗೆ ಬಂದಿದ್ದೆ. ನನ್ನ ಆಫೀಸಿಗೆ ಒಬ್ಬರು ಆಗಮಿಸಿದ್ದರಂತೆ. ಅವರು ಕೆಲವು ದಾಖಲೆಗಳನ್ನ ಕೇಳಿದ್ದಾರೆ. ಬಳಿಕ ಆಫೀಸಿನಿಂದ ನನಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಯಾರೋ ನಿಮ್ಮನ್ನ ಕೇಳಿಕೊಂಡು ಬಂದಿದ್ದಾರೆ. ನಿಮ್ಮಜೊತೆ ಮಾತನಾಡಬೇಕೆಂದು ಕೇಳ್ತಿದ್ದಾರೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದರು. ನಾನು ಅವರನ್ನ ಯಾರೆಂದು ವಿಚಾರಿಸಿದೆ ಎಂದು ಹೇಳಿದ ಕೆಂಪಣ್ಣ, ಹೋಂ ಡಿಪಾರ್ಟಮೆಂಟ್ ನಿಂದ ಬಂದಿದ್ದೇವೆ ಎಂದಿದ್ದಾರೆ. ನಿಮ್ಮನ್ನ ಭೇಟಿಯಾಗಬೇಕು ಎಂದಿದ್ಧಾರೆ. ನಾನು ಇಂದು ಸಿಗ್ತೇನೆ ಎಲ್ಲಿಗೆ ಬರಬೇಕೆಂದು ಕೇಳಿದ್ದೇನೆ. ಅವರು ಹೇಳಿದ ಜಾಗಕ್ಕೆ ನಾವು ಹೋಗ್ತೇವೆ. ನಮ್ಮ ಕಾರ್ಯದರ್ಶಿ ಕರೆದುಕೊಂಡು ಹೋಗ್ತೇನೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.